

ಬೆಂಗಳೂರು: ವೇಗವಾಗಿ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟು ಮತ್ತೋರ್ವರಿಗೆ ತೀವ್ರ ಗಾಯಗಳಾಗಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.
ಮರಿಯಪ್ಪನ ಪಾಳ್ಯ ನಿವಾಸಿ ಕಮಲ್ ಮಣಿ ಮೃತ ದುರ್ದೈವಿ, ಇವರು ತಮ್ಮ ಪತ್ನಿ ಲಾವಣ್ಯ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ, ಲಾವಣ್ಯ ಅಪಾಯದಿಂದ ಪಾರಾಗಿದ್ದಾರೆ.
ಎರಡು ವರ್ಷಗಳ ಹಿಂದೆ ಲಾವಣ್ಯ ಮತ್ತು ಕಮಲ್ ಮಣಿ ಗೆ ವಿವಾಹವಾಗಿತ್ತು. ಕಮಲ್ ಮಣಿ ಬಸವೇಶ್ವರ್ ನಗರಗ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಲಾವಣ್ಯರನ್ನು ರಾಜಾಜಿನಗರದ ಕಚೇರಿಗೆ ಡ್ರಾಪ್ ಮಾಡುವ ವೇಳೆ ಬೆಳಗ್ಗೆ ಸುಮಾರು 9.30 ರ ವೇಳೆಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಕಮಲ್ ಮಣಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ರಾಜಾಜಿನಗರ ಪೊಲೀಸರು ಬಸ್ ಚಾಲಕನನ್ನು ಬಂಧಿಸಿದ್ದಾರೆ.