

ಉಡುಪಿ: ಪೇಜಾವರ ಮಠ ವೃಕ್ಷ ರಕ್ಷಾ, ವಿಶ್ವ ರಕ್ಷಾ ಅಭಿಯಾನ ಕೈಗೊಂಡಿದ್ದು, ಮಠದ ವಿಶ್ವೇಶ ತೀರ್ಥ ಸ್ವಾಮಿಗಳ 2 ವರ್ಷಗಳ ಪರ್ಯಾಯ ಅವಧಿಯಲ್ಲಿ ಒಂದು ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ.
ಮರಗಳನ್ನು ಉಳಿಸಲು ವೃಕ್ಷ ರಕ್ಷಾ, ವಿಶ್ವ ರಕ್ಷಾ ಅಭಿಯಾನವನ್ನು 2014 ರ ಏಪ್ರಿಲ್ 30 ರಂದು ಪ್ರಾರಂಭಿಸಲಾಗಿತ್ತು. ತಮ್ಮ ಐತಿಹಾಸಿಕ ಪರ್ಯಾಯ ಪೀಠಾರೋಹಣ ಕಾರ್ಯಕ್ರಮದ ಅಂಗವಾಗಿ ಈ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೇಜಾವರ ಮಠದ ವಿಶ್ವೇಶ ತೀರ್ಥರು ನಿರ್ಧರಿಸಿದ್ದು ಮಠಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಸಸಿಗಳನ್ನು ಪ್ರಸಾದದ ರೀತಿಯಲ್ಲಿ ನೀಡಲು ನಿರ್ಧರಿಸಲಾಗಿದೆ.
ವಾಸುದೇವ್ ಭಟ್ ಎಂಬುವವರು ಈ ಅಭಿಯಾನವನ್ನು ಮುನ್ನಡೆಸುತ್ತಿದ್ದು, ವಿವಿಧ ತಳಿಯ ಸಸ್ಯಗಳಿಗಾಗಿ ಅರಣ್ಯ ಮತ್ತು ತೋಟಗಾರಿಕೆ ಇಲಾಖೆಗೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಹೇಳಿದ್ದಾರೆ. ಮಾರ್ಚ್ 13 ರಂದು ನಡೆಯಲಿರುವ ಸಮಾವೇಶದಲ್ಲಿ 5,000 ಸಸಿಗಳನ್ನು ನೀಡಲಾಗುತ್ತದೆ, ಮೊದಲ ಹಂತದಲ್ಲಿ 5 ಲಕ್ಷ ಹೂವಿನ ಸಸ್ಯಗಳನ್ನು 5 ಲಕ್ಷ ಹಣ್ಣಿನ ಸಸ್ಯಗಳನ್ನು 5 ಲಕ್ಷ ಔಷಧ ಸಸ್ಯಗಳನ್ನು ನೀಡಲಾಗುತ್ತದೆ ಎಂದು ವಾಸುದೇವ್ ಭಟ್ ತಿಳಿಸಿದ್ದಾರೆ.