

ನವದೆಹಲಿ: ರಾಜ್ಯಸಭಾ ಚುನಾವಣೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಕುದುರೆ ವ್ಯಾಪಾರ ಪ್ರಕರಣವನ್ನು ವಿರೋಧಿಸಿರುವ ಜೆಡಿಎಸ್ ಪಕ್ಷ ಇದೀಗ ರಾಜ್ಯಸಭಾ ಚುನಾವಣೆ ರದ್ದು ಮಾಡುವಂತೆ ಶುಕ್ರವಾರ ಚುನಾವಣಾ ಆಯೋಗಕ್ಕೆ ಆಗ್ರಹಿಸಿದೆ.
ಈ ಕುರಿತಂತೆ ಮಾತನಾಡಿರುವ ಜೆಡಿ(ಎಸ್) ನಾಯಕ ದಾನಿಶ್ ಅಲಿ ಅವರು, ಪ್ರಕರಣವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಪಕ್ಷ ಚುನಾವಣೆಯನ್ನು ರದ್ದು ಮಾಡುವಂತೆ ಆಗ್ರಹಿಸುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಪ್ರತಿಕ್ರಿಯೆ ಕೂಡ ಇದೇ ರೀತಿಯಾಗಿ ಆಗಿರುತ್ತದೆ ಎಂದು ನಂಬಿದ್ದೇವೆಂದು ಹೇಳಿದ್ದಾರೆ.
ಇದೊಂದು ದುರಾದೃಷ್ಟಕರ ವಿಚಾರ. ಒಂದು ರಾಜಕೀಯ ಪಕ್ಷವಾಗಿ ಇಂತಹ ಪ್ರಕರಣಗಳನ್ನು ನಾವು ವಿರೋಧಿಸುತ್ತೇವೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮುಖಕ್ಕೆ ಇದೊಂದು ಮಸಿ ಬಳಿದಂತೆ. ಚುನಾವಣೆ ಹೆಸರಿನಲ್ಲಿ ಕುದರೆ ವ್ಯಾಪಾರ ಮಾಡುತ್ತಿರುವ ಅಭ್ಯರ್ಥಿಗಳು ರಾಜ್ಯಸಭೆಗೆ ಕಾಲಿಡಬಾರದು.
ಪ್ರಕರಣ ಕುರಿತಂತೆ ಪಕ್ಷದ ವರಿಷ್ಠರೊಂದಿಗೆ ಇಂದು ಮಾತುಕತೆ ನಡೆಸುತ್ತೇನೆ. ಕುದರೆ ವ್ಯಾಪಾರ ಕುರಿತು ಚುನಾವಣೆ ಆಯೋಗ ಮಾಹಿತಿ ಪಡೆದುಕೊಂಡಿದ್ದೇ ಆದರೆ, ಕುದುರೆ ವ್ಯಾಪಾರದಲ್ಲಿ ಭಾಗಿಯಾದ ಆಯೋ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಲಿದೆ ಎಂದುಕೊಂಡಿದ್ದೇನೆ.
ಇದೇ ವೇಳೆ ಜೆಡಿಎಸ್ ಪಕ್ಷದ ಶಾಸಕರೊಬ್ಬರು ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಪ್ರಶ್ನೆ ಕುರಿತಂತೆ ಮಾತನಾಡಿರುವ ಅವರು, ಇಂತಹ ಭ್ರಷ್ಟತೆಯನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ. ಅಂತಹ ಶಾಸಕರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದ್ದು, ಪಕ್ಷದಿಂದ ಹೊರ ಹಾಕಲಾಗುತ್ತದೆ ಎಂದು ಹೇಳಿದ್ದಾರೆ.