ಸಿಎಂ ಸುಗಮ ಸಂಚಾರಕ್ಕೆ ಆ್ಯಂಬುಲೆನ್ಸ್ ತಡೆದ ಪೊಲೀಸರು: ಮಹಿಳೆ ಸಾವು?

ರಾಜ್ಯ ಪೊಲೀಸರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಸಿದ್ದರಾಮಯ್ಯ ಅವರ ಸಂಚಾರಕ್ಕೆ ಅನುವು ಮಾಡಿಕೊಡಲು ಆ್ಯಂಬುಲೆನ್ಸ್ ಗೆ ದಾರಿ ಬಿಡದ ಹಿನ್ನೆಲೆಯಲ್ಲಿ...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯ ಪೊಲೀಸರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಸಿದ್ದರಾಮಯ್ಯ ಅವರ ಸಂಚಾರಕ್ಕೆ ಅನುವು ಮಾಡಿಕೊಡಲು ಆ್ಯಂಬುಲೆನ್ಸ್ ಗೆ ದಾರಿ ಬಿಡದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆಂಬ ವಿಡಿಯೋವೊಂದು ಸಾಮಾಜಿಕ ಜಾಲದಲ್ಲಿ ಹರಿದಾಡುತ್ತಿದೆ.

ಜೂ.25 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಕಾರ್ಯಕ್ರಮ ಮುಗಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಸಂಚಾರಕ್ಕೆ ನಿರ್ಬಂಧವನ್ನು ಹೇರಲಾಗಿತ್ತು. ಇದೇ ವೇಳೆ ಕೋಲಾರ ಜಿಲ್ಲೆಯ ನರಸಾಪುರದಿಂದ ಬರುತ್ತಿದ್ದ ಆ್ಯಂಬುಲೆನ್ಸ್ ನಲ್ಲಿ ಮಹಿಳೆಯೊಬ್ಬರನ್ನು ತುರ್ತುಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗುತ್ತಿತ್ತು.

ಆ್ಯಂಬುಲೆನ್ಸ್ ನಲ್ಲಿ ಕುಳಿತುಕೊಂಡಿದ್ದ ಮಹಿಳೆಯ ಸಂಬಂಧಿಕರು ಸಂಚಾರ ಪೊಲೀಸರ ಬಳಿ ಮನವಿಯನ್ನು ಮಾಡಿಕೊಂಡಿದ್ದರೂ ಅವಕಾಶವನ್ನು ನೀಡಿರಲಿಲ್ಲ. ಮಹಿಳೆಯ ಪುತ್ರ ಕೂಡ ಆ್ಯಂಬುಲೆನ್ಸ್ ನಿಂದ ಕೆಳಗಿಳಿದು ತಾಯಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ದಯವಿಟ್ಟು ಅವಕಾಶ ನೀಡಿ ಎಂದು ಬೇಡಿಕೊಂಡಿದ್ದರು ಪೊಲೀಸರು ಅವಕಾಶ ನೀಡದಿರುವುದು ವಿಡಿಯೋದಲ್ಲಿನ ತುಣುಕುಗಳಲ್ಲಿ ಕಂಡುಬಂದಿದೆ.

ಇದಲ್ಲದೆ, ಆ್ಯಂಬುಲೆನ್ಸ್ ಗೆ ದಾರಿ ಬಿಡುವಂತೆ ಸಾರ್ವಜನಿಕರೂ ಕೂಡ ಪೊಲೀಸರ ಬಳಿ ಮನವಿ ಮಾಡಿದ್ದು, ಪೊಲೀಸರು ಮನವಿಯನ್ನು ತಿರಸ್ಕರಿಸಿದ್ದಾರೆ. ನಂತರ ರೊಚ್ಚಿಗೆದ್ದಿರುವ ಸ್ಥಳೀಯರು ಬ್ಯಾರಿಕೇಡ್ ಗಳನ್ನು ತಳ್ಳಿಹಾಕಿ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಡಲು ಮುಂದಾಗಿದ್ದಾರೆ. ಇದರಿಂದಾಗಿ ಜನರನ್ನು ಹಿಂದಕ್ಕೆ ಸರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರು ಎನ್ನಲಾಗಿದೆ.

ಸಿಎಂ ಮತ್ತು ಬೆಂಗಾವಲು ಪಡೆ ವಾಹನಗಳು ನಿರ್ಗಮಿಸಿದ ಬಳಿಕ ಆ್ಯಂಬುಲೆನ್ಸ್ ಹೋಗಲು ದಾರಿ ಮಾಡಿಕೊಡಲಾಗಿದೆ. ದಾರಿ ಬಿಡುವಂತೆ ಮಹಿಳೆಯ ಮಗ ಬೇಡಿಕೊಳ್ಳುತ್ತಿರುವ ಮನಕಲಕುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಪೊಲೀಸರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಸಿಎಂ ಹಾಗೂ ಅವರ ಬೆಂಗಾವಲು ಪಡೆ ವಾಹನಗಳು ಹೋದ ಬಳಿಕ ಆ್ಯಂಬುಲೆನ್ಸ್ ಆಸ್ಪತ್ರೆಗೆ ಸಾಗಿದ್ದು, ಆಸ್ಪತ್ರೆಗೆ ತಲುಪುತ್ತಿದ್ದಂತೆ ಮಹಿಳೆ ಸಾವನ್ನಪ್ಪಿದ್ದಾರೆಂದು ಆರೋಪಿಸಲಾಗಿದೆ. ಇನ್ನು ಈ ಘಟನೆಯ ಸಂಪೂರ್ಣ ವಿಡಿಯೋವನ್ನು ಚಂದ್ರ. ಎಸ್ ಎಂಬುವವರ ಮೊಬೈಲ್ ಫೋನಿನಿಂದ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ,

ಆರೋಪ ತಳ್ಳಿಹಾಕಿದ ಪೊಲೀಸರು

ಇನ್ನು ತಮ್ಮ ವಿರುದ್ಧ ಕೇಳಿ ಬರುತ್ತಿರುವ ಆರೋಪವನ್ನು ತಳ್ಳಿ ಹಾಕಿರುವ ಅಧಿಕಾರಿಗಳು, ಹೆದ್ದಾರಿ ಸಂಚಾರ ನಿರ್ಬಂಧದ ವೇಳೆ ಆ್ಯಂಬುಲೆನ್ಸ್ ಒಂದು ಬಂದಿತ್ತು. ಆ್ಯಂಬುಲೆನ್ಸ್ ನಲ್ಲಿ ಪುರಷರೊಬ್ಬರು ಇದ್ದರು. ಆ್ಯಂಬುಲೆನ್ಸ್ ನಲ್ಲಿ ನವೀನ್ ಎಂಬ ಹೆಸರಿನ ರೋಗಿಯೊಬ್ಬರು ಇದ್ದಾರೆ. ನರ್ಸಾಪುರ ಗ್ರಾಮದ ಹೊಸ್ಮಾಟ್ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಪರಿಸ್ಥಿತಿಯೇನು ಗಂಭೀರವಾಗಿಲ್ಲ ಎಂದು ಆ್ಯಂಬುಲೆನ್ಸ್ ಸಿಬ್ಬಂದಿಗಳು ಹೇಳಿದ್ದರು ಎಂದು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com