ವೃದ್ಧ ದಂಪತಿಗಳು ಮೃತಪಟ್ಟಿದ್ದು ಹಸಿವಿನಿಂದ!

ನಗರದ ಮನೋರಾಯನಪಾಳ್ಯದ ಮನೆಯೊಂದರಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದ ವೃದ್ಧ ದಂಪತಿಗಳ ಸಾವಿಗೆ ಆಹಾರ ಸೇವಿಸದಿರುವುದೇ ಕಾರಣ ಎಂದು ಇದೀಗ ತಿಳಿದುಬಂದಿದೆ...
ವೃದ್ಧನೊಬ್ಬ ವೆಂಕೋಬರಾವ್ ಮನೆ ನೋಡಿಕೊಂಡು ನಡೆದು ಹೋಗುತ್ತಿರುವುದು
ವೃದ್ಧನೊಬ್ಬ ವೆಂಕೋಬರಾವ್ ಮನೆ ನೋಡಿಕೊಂಡು ನಡೆದು ಹೋಗುತ್ತಿರುವುದು

ಬೆಂಗಳೂರು: ನಗರದ ಮನೋರಾಯನಪಾಳ್ಯದ ಮನೆಯೊಂದರಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದ ವೃದ್ಧ ದಂಪತಿಗಳ ಸಾವಿಗೆ ಆಹಾರ ಸೇವಿಸದಿರುವುದೇ ಕಾರಣ ಎಂದು ಇದೀಗ ತಿಳಿದುಬಂದಿದೆ.

ನಿವೃತ್ತ ಪೊಲೀಸ್ ಪೇದೆಯಾಗಿದ್ದ ವೆಂಕೋಬರಾವ್ (80) ಮತ್ತು ಅವರ ಪತ್ನಿ ಕಲಾದೇವಿಬಾಯಿ (75) ಕೊಳೆತ ಸ್ಥಿತಿಯಲ್ಲಿ ಮನೆಯೊಂದರಲ್ಲಿ ಪತ್ತೆಯಾಗಿದ್ದರು. ಇದರಂತೆ ಶವ ಪರೀಕ್ಷೆ ವೇಳೆ ದಂಪತಿಗಳು ಕಳೆದ ಒಂದು ವಾರದಿಂದ ಆಹಾರ ಸೇವನೆ ಮಾಡಿರಲಿಲ್ಲ ಎಂಬುದು ಇದೀಗ ಬೆಳಕಿಗೆ ಬಂದಿದೆ.

ಮೃತ ದಂಪತಿಗಳಿಗೆ ಮಕ್ಕಳಿಲ್ಲದ ಕಾರಣ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಮನೆಯಿಂದಲೂ ಹೊರಬರುತ್ತಿರಲಿಲ್ಲ. ಯಾವಾಗಲೂ ಮನೆಯಲ್ಲೇ ಇರುತ್ತಿದ್ದರಿಂದ ಆ ಮನೆಯಲ್ಲಿ ಜನ ವಾಸ ಮಾಡುತ್ತಿರುವ ವಿಚಾರ ಅಲ್ಲಿನ ಬೀದಿಯ ಎಷ್ಟೋ ಮಂದಿಗೆ ತಿಳಿದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮಕ್ಕಳಿಲ್ಲ ಎಂಬ ಕೊರಗು ವೃದ್ಧ ದಂಪತಿಗಳಿಗಿತ್ತು. ಇಬ್ಬರೂ ವೃದ್ಧರಾದ್ದರಿಂದ ಮನೆಯಲ್ಲಿ ಸರಿಯಾಗಿ ಅಡುಗೆ ಮಾಡುತ್ತಿರುವ ಬಗ್ಗೆ ಕುರುಹುಗಳು ಸಿಕ್ಕಿಲ್ಲ. ಮನೆಯಲ್ಲಿದ್ದ ದವಸ ಧಾನ್ಯಗಳು ಹಾಗೆಯೇ ಇರುವುದು ಕಂಡು ಬಂದಿದೆ. ಇನ್ನು ಅಡುಗೆ ಮನೆಯಲ್ಲೂ ಕಸದ ರಾಶಿ ತುಂಬಿಕೊಂಡಿದ್ದು, ಮನೆ ನಿರ್ವಹಣೆ ಸರಿಯಾಗಿ ಮಾಡಿಕೊಂಡಿಲ್ಲ. ಮನೆಯಲ್ಲಿ ಆಹಾಗ ಹಾಗೂ ಶುದ್ಧ ಗಾಳಿ ಇಲ್ಲದ ಕಾರಣ ದಂಪತಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರೂ ಕೂಡ ಇದೊಂದು ವಯೋಸಹಜ ಸಾವು ಎಂದು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಕಲಾವತಿಯವರು ಕಳೆದ ಹತ್ತು ವರ್ಷಗಳಿಂದಲೂ ಎಂದೂ ಹೊರ ಬರುತ್ತಿರಲಿಲ್ಲ. ಕೆಲವೊಮ್ಮೆ ಮಾತ್ರ ಕಿಟಕಿಯಿಂದಷ್ಟೇ ಹೊರ ನೋಡುತ್ತಿದ್ದರು ಎಂದು ನೆರೆಮನೆಯ ವಿಮಲ ಎಂಬುವವರು ಹೇಳಿದ್ದಾರೆ.

ವರದಿಯಲ್ಲಿ ದಂಪತಿಗಳು ಮೂರು ದಿನಗಳ ಹಿಂದೆಯೇ ಸಾವನ್ನಪ್ಪಿರುವುದಾಗಿ ತಿಳಿಸಲಾಗಿದೆ. ಮಂಗಳವಾರ ಮನೆಯ ಬಳಿ ಕೆಟ್ಟ ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಬಾಗಿಲು ಒಡೆದು ಒಳ ಬಂದಿದ್ದ ಪೊಲೀಸರಿಗೆ ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com