ಫಲ ನೀಡಿದ ಹೋರಾಟ: ದೇವೇಗೌಡರ ಹೋರಾಟಕ್ಕೆ ವಿಧಾನಸಭೆಯಲ್ಲಿ ಒಕ್ಕೊರಲಿನ ಶ್ಲಾಘನೆ

ಕಾವೇರಿ ವಿಚಾರವಾಗಿ ಮಾಜಿ ಪ್ರಧಾನಿ ದೇವೇಗೌಡ ಅವರು ನಡೆಸಿದ ಧರಣಿಗೆ ವಿಶೇಷ ಸದನದಲ್ಲಿ ಪಕ್ಷಾತೀತವಾಗಿ ಶ್ಲಾಘನೆ ವ್ಯಕ್ತವಾಗಿದ್ದು, ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ನಾಯಕರು ದೇವೇಗೌಡರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಎಚ್ ಡಿ ದೇವೇಗೌಡ ಹಾಗೂ ವಿಧಾನಸಭೆ (ಸಂಗ್ರಹ ಚಿತ್ರ)
ಎಚ್ ಡಿ ದೇವೇಗೌಡ ಹಾಗೂ ವಿಧಾನಸಭೆ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಕಾವೇರಿ ವಿಚಾರವಾಗಿ ಮಾಜಿ ಪ್ರಧಾನಿ ದೇವೇಗೌಡ ಅವರು ನಡೆಸಿದ ಧರಣಿಗೆ ವಿಶೇಷ ಸದನದಲ್ಲಿ ಪಕ್ಷಾತೀತವಾಗಿ ಶ್ಲಾಘನೆ ವ್ಯಕ್ತವಾಗಿದ್ದು, ವಿಧಾನಸಭೆ ಕಲಾಪದಲ್ಲಿ  ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ನಾಯಕರು ದೇವೇಗೌಡರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧ ಇಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿ ಕರ್ನಾಟಕದ ಪಾಲಿಗೆ ಆಶಾದಾಯಕವಾಗಿದ್ದು, ಇದಕ್ಕೆ  ನೇರ ಹಾಗೂ ಪರೋಕ್ಷವಾಗಿ ಕಾರಣರಾದ ಎಲ್ಲ ನಾಯಕರಿಗೂ ವಿಧಾನಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಪ್ರಮುಖವಾಗಿ ಕಾವೇರಿ ವಿಚಾರವಾಗಿ ತಮ್ಮ ಇಳಿವಯಸ್ಸಿನಲ್ಲಿಯೂ  ಉಪವಾಸ ಸತ್ಯಾಗ್ರಹ ಕುಳಿತಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಇಡೀ ಸದನದ ಶ್ಲಾಘನೆಗೆ ಪಾತ್ರರಾದರು.

ಕಾವೇರಿ ವಿಚಾರವಾಗಿ ಸೆ.30 ರ ಆದೇಶ ಮಾರ್ಪಾಡಿಗೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರವನ್ನು ಪ್ರಸ್ತಾಪಿಸಿ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಪ್ರಧಾನಿ ನರೇಂದ್ರ  ಮೋದಿ, ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರ ಸತತ ಪರಿಶ್ರಮದ ಫಲವಾಗಿ ಇಂದು ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿದೆ ಎಂದು ಹೇಳಿದರು, ಈ ವೇಳೆ ಮಾತನಾಡಿದ ಜೆಡಿಎಸ್ ಸದಸ್ಯ  ವೈಎಸ್ ವಿ ದತ್ತಾ ಅವರು, ಕಾವೇರಿ ವಿಚಾರವಾಗಿ ಪ್ರಸ್ತುತ ಕರ್ನಾಟಕದ ಆಶಾದಾಯಕ ಪರಿಸ್ಥಿತಿಗೆ ಎಚ್ ಡಿ ದೇವೇಗೌಡ ಅವರ ಹೋರಾಟ ಕೂಡ ಕಾರಣ. ಹೀಗಾಗಿ ಕಾವೇರಿ ವಿಚಾರವಾಗಿ  ಅವರ ಕಾಣಿಕೆಯನ್ನು ಮರೆಯುವಂತಿಲ್ಲ ಎಂದು ಹೇಳಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್ ಅವರು, ಕಾವೇರಿ ವಿಚಾರವಾಗಿ ಇಂದು ಕರ್ನಾಟಕಕ್ಕೆ ಆಶಾದಾಯಕ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣರಾದ ಪ್ರಧಾನಿ  ನರೇಂದ್ರ ಮೋದಿ ಹಾಗೂ ಕಾವೇರಿ ವಿಚಾರವಾಗಿ ಹೋರಾಟ ಮಾಡಿ ಕೇಂದ್ರದ ಗಮನ ಸೆಳೆದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಶ್ಲಾಘಿಸಬೇಕಿದೆ ನಿಜ. ಆದರೆ ಪ್ರಧಾನಿ  ನರೇಂದ್ರ ಮೋದಿ ಅವರನ್ನಾಗಲಿ ಅಥವಾ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಹೋರಾಟವನ್ನು ಯಾವುದೇ ಪಕ್ಷಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ರಾಜ್ಯದ ಹಿತಕ್ಕೆ ಪೂರಕವಾಗಿ  ಸ್ಪಂಧಿಸಿದ ಎಲ್ಲ ನಾಯಕರನ್ನೂ ಶ್ಲಾಘಿಸಬೇಕು. ದೇವೇಗೌಡರಿಗಿ ಈಗ 84 ವರ್ಷ ವಯಸ್ಸು, ಈ ವಯಸ್ಸಿನಲ್ಲಿ ಹೋರಾಟಕ್ಕಿಳಿಯುವ ಅವಶ್ಯಕತೆ ಅವರಿಗಿರಲಿಲ್ಲ. ಕೇವಲ ರಾಜ್ಯದ ಹಿತಕಾಯಲು  ಅವರು ಸತ್ಯಾಗ್ರಹ ನಡೆಸಿದರು. ಹೀಗಾಗಿ ಅವರ ಹೋರಾಟವನ್ನು ಪಕ್ಷಾತೀತವಾಗಿ ಶ್ಲಾಘಿಸಬೇಕೆ ಹೊರತು ಒಂದು ಪಕ್ಷಕ್ಕೆ ಸೀಮಿತಗೊಳಿಸಬಾರದು ಎಂದು ರಮೇಶ್ ಕುಮಾರ್ ಅವರು  ಹೇಳಿದರು. ರಮೇಶ್ ಕುಮಾರ್ ಅವರ ಮಾತಿಗೆ ಇಡೀ ಸದನದ ಬೆಂಬಲ ವ್ಯಕ್ತವಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com