

ಸೇಲಂ: ಕಾವೇರಿ ನದಿ ನೀರು ಹಂಚಿಕೆ ವಿವಾದ ಕರ್ನಾಟಕ ಹಾಗೂ ತಮಿಳುನಾಡು ಗಡಿಯಲ್ಲಿ ಉದ್ವಿಗ್ನ ವಾತಾವರಣವನ್ನು ನಿರ್ಮಾಣ ಮಾಡಿದ್ದು, ಗಡಿಯಲ್ಲಿ ಓಡಾಡಲು ಜನರು ಹೆದರುವಂತಹ ಪರಿಸ್ಥಿತಿ ಎದುರಾಗಿದೆ.
ಸುಪ್ರೀಂ ಆದೇಶದಂತೆ ರಾಜ್ಯ ಸರ್ಕಾರ ಕರ್ನಾಟಕದ ಜಲಾಶಯಗಳಿಂದ 16 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿದೆ ನಿನ್ನೆಯಷ್ಟೇ ಬಿಡುಗಡೆ ಮಾಡಿತ್ತು. ಕೃಷ್ಣರಾಜ ಸಾಗರ ಜಲಾಶಯದಿಂದ 11,000, ಹಾರಂಗಿ 2, 000 ಹಾಗೂ ಕಬಿನಿಯಿಂದ 5,000 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಿತ್ತು. ಮತ್ತೂರು ಅಣೆಕಟ್ಟಿಗೆ ನೀರನ್ನು ಬಿಡುಗಡೆ ಮಾಡಲಾಗಿತ್ತು. ಮತ್ತೂರು ಅಣೆಕಟ್ಟಿನಿಂದ ಬಿಳಿಗುಂಡ್ಲುಗೆ ನಿನ್ನೆ ರಾತ್ರಿಯಷ್ಟೇ ನೀರು ತಲುಪಿತ್ತು.
ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದಕ್ಕೆ ಮಂಡ್ಯದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ, ಬೀದಿಗಿಳಿದು ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ಕೂಡ ಮಂಡ್ಯದಾದ್ಯಂತ ಬಂದ್ ಆಚರಣೆ ಮಾಡಲಾಗಿತ್ತು. ಕೆಆರ್ ಎಸ್ ಜಲಾಶಯದ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಚದುರಿಸುವ ಸಲುವಾಗಿ ಪೊಲೀಸರು ಲಾಠಿಚಾರ್ಜ್ ನ್ನು ಮಾಡಿದ್ದರು. ಪೊಲೀಸರ ಲಾಠಿಚಾರ್ಜ್ ಹೆಚ್ಚಾಗುತ್ತಿದ್ದಂತೆ ರೈತರು ಮತ್ತಷ್ಟು ತೀವ್ರವಾಗಿ ಪ್ರತಿಭಟನೆ ನಡೆಸಲು ಆರಂಭಿಸಿದ್ದರು.
ಇದೇ ವೇಳೆ ಕೆಂಗಲ್ ಕೊಪ್ಪಲು ಮೂಲದ ರೈತ ಸುರೇಶ್ (55) ಎಂಬುವವರು ಕಾವೇರಿ ನದಿಗೆ ಹಾರುವ ಮೂಲಕ ಆತ್ಮಹತ್ಯೆಗೆ ಯತ್ನ ನಡೆಸಿದ್ದರು. ಈ ವೇಳೆ ಅಧಿಕಾರಿಗಳು ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ನಂತರ ರೈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರತಿಭಟನೆ ಪರಿಣಾಮ ಸಂಚಾರ ವ್ಯವಸ್ಥೆ ಮೇಲೂ ಬೀಳಲು ಆರಂಭವಾಗಿತ್ತು. ಕರ್ನಾಟಕದಿಂದ ತಮಿಳುನಾಡಿಗೆ ಹೋಗುವ ಎಲ್ಲಾ ಸರ್ಕಾರಿ ಬಸ್ ಗಳನ್ನು ಸ್ಥಗಿತಗೊಳಿಸಲಾಗಿತ್ತು. ಮಂಡ್ಯದಲ್ಲಿ ಯುವಕರು, ಮಹಿಳೆಯರು ಸೇರಿದಂತೆ ಮಕ್ಕಳೂ ಕೂಡ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಹಲವೆಡೆ ಟೈಯರ್ ಗಳಿಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ಮತ್ತು ಕೆಆರ್ ಎಸ್ ನ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತ್ತು.
ಇದಲ್ಲದೆ ನಗರದ ಮೇಲೂ ಕಾವೇರಿ ಪ್ರತಿಭಟನೆ ಬಿಸಿ ತಟ್ಟಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ರೈಲ್ವೆ ನಿಲ್ದಾಣಕ್ಕೂ ಕನ್ನಡ ಪರ ಸಂಘಟನೆಗಳು ಕಾಲಿಟ್ಟ ಪರಿಣಾಮ ರೈಲು ಸೇವೆಗಳಿಗೆ ಕೆಲ ಗಂಟೆಗಳ ಕಾಲ ಸಮಸ್ಯೆಗಳು ಉಂಟಾಗಿತ್ತು.
ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಚ್ಚರ ವಹಿಸಿರುವ ರಾಜ್ಯ ಸರ್ಕಾರ ಈ ಬಗ್ಗೆ ಕೇಂದ್ರಕ್ಕೆ ಪತ್ರವೊಂದನ್ನು ಬರೆದಿದೆ ಎಂದು ಹೇಳಲಾಗುತ್ತಿದೆ. ಜಲಾಶಯಗಳ ನೀರಿನ ಮಟ್ಟ ತಪಾಸಣೆ ನಡೆಸಲು ತಜ್ಞರ ತಂಡವೊಂದನ್ನು ರಾಜ್ಯಕ್ಕೆ ಕಳುಹಿಸಿಕೊಂಡುವಂತೆ ಪತ್ರದಲ್ಲಿ ಮನವಿ ಮಾಡಿದೆ ಎಂದು ತಿಳಿದುಬಂದಿದೆ.