

ಬೆಂಗಳೂರು: ವಿಶ್ವವಾಣಿ ಸಂಪಾದಕ ವಿಶ್ವೇಶ್ವರ್ ಭಟ್, ಸಂಸದ ಪ್ರತಾಪ್ ಸಿಂಹ, ಸಂಕೇಶ್ವರ್, ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವರ ಹತ್ಯೆಗೆ ಸಂಚು ರೂಪಿಸಿದ್ದ 13 ಆರೋಪಿಗಳು ತಪ್ಪಿತಸ್ಥರೆಂದು ಎನ್ಐಎನ ವಿಶೇಷ ನ್ಯಾಯಾಲಯ ಆದೇಶಿಸಿದ್ದು, ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಿದೆ.
ಲಷ್ಕರ ಇ ತೊಯ್ಬಾ ಉಗ್ರ ಸಂಘಟನೆಯ ಸೈಯದ್, ಜಿಯಾವುಲ್ಲ ಸೇರಿದಂತೆ 13 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) 12 ಆರೋಪಿಗಳ ವಿರುದ್ಧ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿತ್ತು. ಕೊಲೆ ಸಂಚಿನ ಸಂಬಂಧ 2012ರ ಆಗಸ್ಟ್ 29ರಂದು ಪ್ರಕರಣ ದಾಖಲಾಗಿತ್ತು.
ಅಂಕಣಕಾರ ಪ್ರತಾಪ್ ಸಿಂಹ ಅವರು ಸ್ನೇಹಿತನ ಮನೆಯಿಂದ ಗಿರಿನಗರದಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದಾಗ ಅವರನ್ನು ಕೊಲ್ಲಲು ಈ ದುಷ್ಕರ್ಮಿಗಳು ನಡೆಸಿದ ಸಂಚನ್ನು ಸಿಸಿಬಿ ಪೊಲೀಸರು ಭೇದಿಸಿದ್ದರು. ನಂತರದ ತನಿಖೆಯಲ್ಲಿ ಸತ್ಯಾಂಶ ಇರುವುದನ್ನು ಕೊನೆಗೂ ಎನ್ಐಎ ಎತ್ತಿ ಹಿಡಿದಿದೆ.