ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಸತತ ಮೂರನೇ ದಿನವಾದ ಇಂದು ಕೂಡ ಕಲಬುರಗಿ ಜಿಲ್ಲೆಯ ಚಿತ್ತಾಪುರ, ಸೇಡಂ, ಬೀದರ್ ನ ಭಾಲ್ಕಿ, ಯಾದಗಿರಿಗಳಲ್ಲಿ ಭಾರೀ ಮಳೆಯಾಗಿದೆ.
ಜೋರಾದ ಮಳೆಗೆ ಬೀದರ್ ಜಿಲ್ಲೆಯ ಭಾಲ್ಕಿ ಮತ್ತು ಹುಮ್ನಾಬಾದ್ ತಾಲ್ಲೂಕುಗಳಲ್ಲಿ ಆರು ತಿಂಗಳ ಮಗು ಮತ್ತು 7 ವರ್ಷದ ಬಾಲಕ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ಅನಾರೋಗ್ಯಕ್ಕೀಡಾದ ಮಗುವನ್ನು ತೀವ್ರ ಮಳೆಯಿಂದಾಗಿ ಮನೆಯವರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದೆ ಮಗು ಮೃತಪಟ್ಟಿದೆ. ಅನೇಕ ಮನೆಗಳು ಹಾನಿಗೀಡಾಗಿವೆ. ಮರಗಳು ಧರೆಗುರುಳಿವೆ. ರಸ್ತೆಯಲ್ಲೆಲ್ಲಾ ನೀರು ಉಕ್ಕಿ ಹರಿಯುತ್ತಿದೆ.ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ವರದಿಗಳ ಪ್ರಕಾರ ಬೀದರ್ ಜಿಲ್ಲೆಯೊಂದರಲ್ಲೇ ಸಾವಿರದ 500ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದೆ.
ಕಲಬುರಗಿಯಲ್ಲಿ ಜಲಾಶಯಗಳು ಮತ್ತು ನದಿ-ನಾಲೆಗಳು ತುಂಬಿ ಹರಿಯುತ್ತಿವೆ. ಅನೇಕ ಕಡೆ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.