

ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರು ಇಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡಬೇಕು ಎಂದು ಸುಪ್ರೀಂಕೋರ್ಟ್ ಮತ್ತೆ ಆದೇಶಿಸಿದೆ. ಆದರೆ ಕರ್ನಾಟಕ ತಮಿಳುನಾಡಿಗೆ ಎಷ್ಟು ನೀರು ಬಿಡಬೇಕು ಎಂಬದನ್ನು 2007 ರಲ್ಲಿ ಕಾವೇರಿ ನ್ಯಾಯಾಧೀಕರಣ ನೀಡಿದ ಸೂಚಿಸಿತ್ತು. ಆದರೆ ಕಳೆದ 25 ವರ್ಷಗಳಲ್ಲಿ ಕರ್ನಾಟಕ 1,470.76 ಟಿಎಂಸಿ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸಿದೆ.
ರಾಜ್ಯ ನೀರಾವರಿ ಇಲಾಖೆ ಅಂಕಿ ಅಂಶಗಳ ಮಾಹಿತಿ ಪ್ರಕಾರ ಕಳೆದ 25 ವರ್ಷಗಳಲ್ಲಿ ಕರ್ನಾಟಕ ಒಟ್ಟು 6,083.64 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಿದೆ.
1992ರ ಮಧ್ಯಂತರ ಆದೇಶದ ನಂತರ 1,087.25 ಟಿಎಂಸಿ ಹೆಚ್ಚುವರಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡುಗಡೆ ಮಾಡಿತ್ತು. 2007 ರಲ್ಲಿ ನ್ಯಾಯಾಧೀಕರಣ ಅಂತಿಮ ಆದೇಶ ನೀಡಿದ ನಂತರ ಅಂದರೆ, 2007 ರಿಂದ 2015 ರ ವರೆಗೆ 383.51 ಟಿಎಂಸಿ ಹೆಚ್ಚುವರಿ ನೀರನ್ನು ರಾಜ್ಯ ತಮಿಳುನಾಡಿಗೆ ಹರಿಸಿದೆ.
ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ಕರ್ನಾಟಕ ಬಿಳಿಗುಂಡ್ಲು ಗೇಜಿಂಗ್ ಸೆಂಟರ್ ನಿಂದ 192 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕು ಎಂದು 2007 ರಲ್ಲಿ ಕಾವೇರಿ ನ್ಯಾಯಾಧೀಕರಣ ಅಂತಿಮ ತೀರ್ಪು ನೀಡಿತು. ಅದರಂತೆ 2007-08 ರಿಂದ 2015-16 ರವರೆಗೆ ರಾಜ್ಯ ಸುಮಾರು 1.984.34 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಿದೆ.
ಮತ್ತೊಂದು ಆಸಕ್ತಿದಾಯಕ ವಿಚಾರ ಎಂದರೇ ಕರ್ನಾಟಕದಲ್ಲಿರುವ ಜಲಾಶಯಗಳು ಕಡಿಮೆ ನೀರು ಸಂಗ್ರಹದ ಸಾಮರ್ಥ್ಯ ಹೊಂದಿವೆ. ಹೀಗಾಗಿ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ.
ತಮಿಳು ನಾಡಿನ ಮೆಟ್ಟೂರು ಜಲಾಶಯಕ್ಕೆ ಹೋಲಿಸಿದರೇ ಕೆಆರ್ ಎಸ್ ಸೇರಿದಂತೆ ರಾಜ್ಯದಲ್ಲಿರುವ ಎಲ್ಲಾ ಜಲಾಶಯಗಳ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಿದೆ. ಹೀಗಾಗಿ ಮೇಕೆದಾಟು ಯೋಜನೆ ಸಫಲವಾದರೇ ಹೆಚ್ಚುವರಿ ನೀರನ್ನು ಸಂಗ್ರಹ ಮಾಡಿಕೊಳ್ಳಲು ಸಹಾಯವಾಗುತ್ತದೆ.
ಕಾವೇರಿ ನ್ಯಾಯಾಧೀಕರಣ ಆದೇಶದಂತೆ ಇದುವರೆಗೂ ರಾಜ್ಯ ತಮಿಳುನಾಡಿಗೆ 134 ಟಿಎಂಸಿ ನೀರು ಬಿಡುಗಡೆ ಮಾಡಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಈ ಬಾರಿ ಉತ್ತಮ ಮಳೆಯಾಗದ ಕಾರಣ ಉಳಿದ ನೀರನ್ನು ಬಿಡಲಾಗುತ್ತಿಲ್ಲ.