ರು. 1,506 ಕೋಟಿ ಮೊತ್ತದ ಪೈಪ್ ಲೈನ್ ನೀರು ಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ!

ರಾಜ್ಯದ 110 ಗ್ರಾಮಗಳಿಗೆ ಪೈಪ್ ಲೈನ್ ಮೂಲಕ ನೀರುಣಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಉನ್ನತಮಟ್ಟದ ಸಮಿತಿ ನಿರ್ಧರಿಸಿದ್ದು,...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ 110 ಗ್ರಾಮಗಳಿಗೆ ಪೈಪ್ ಲೈನ್ ಮೂಲಕ ನೀರುಣಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ  ರಾಜ್ಯ ಉನ್ನತಮಟ್ಟದ ಸಮಿತಿ ನಿರ್ಧರಿಸಿದ್ದು, ಒಟ್ಟು 1,506 ಕೋಟಿ ರು. ಗಳ  ವೆಚ್ಚದಲ್ಲಿ ಪೈಪ್ ಲೈನ್ ಮೂಲಕ ನೀರು ರವಾನಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತಮಟ್ಟದ ಸಮಿತಿ ಸಭೆಯಲ್ಲಿ ರಾಜ್ಯದ ವಿವಿಧೆಡೆ ಒಟ್ಟು 8,700 ಕೋಟಿ ರು. ಬಂಡವಾಳ ಹೂಡಲು ರಾಜ್ಯ ಉನ್ನತಮಟ್ಟದ ಸಮಿತಿ ನಿರ್ಧಾರಿಸಿದೆ. ಈ  ಪೈಕಿ  ಜಿಎಂ ಇನ್ಫಿನೈಟ್ ಡ್ವೆಲ್ಲಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮೆಗಾ ಇಂಟಿಗ್ರೇಟೆಡ್ ಟೆಕ್ ಪಾರ್ಕ್ ಯೋಜನೆಗೆ 4,795 ಕೋಟಿ. ರು. ವ್ಯಯಿಸಲಾಗುತ್ತಿದ್ದು, ಪೂರ್ವ ಬೆಂಗಳೂರಿನ ದೊಡ್ಡಕೆನ್ನ ಹಳ್ಳಿ ಗ್ರಾಮದ  ಸುತ್ತಮುತ್ತಲಿನ ಸುಮಾರು 73 ಎಕರೆ ಪ್ರದೇಶವನ್ನು ಯೋಜನೆಗೆ ಮೀಸಲಿಡಲು ನಿರ್ಧರಿಸಲಾಗಿದೆ.

ಈ ಬಹುಉದ್ದೇಶಿತ ಟೆಕ್ ಪಾರ್ಕ್ ನಲ್ಲಿ ಶಾಪಿಂಗ್ ಮಾಲ್, ವಸತಿ ಗೃಹ ಸಮುಚ್ಛಯಗಳು ಮತ್ತು ಕ್ಲಬ್ ಗಳು ಇರಲಿದ್ದು, ಈ ಟೆಕ್ ಪಾರ್ಕ್ ನಿಂದಾಗಿ ಸುಮಾರು 2300 ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ ಎಂದು  ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಆರ್ ವಿದೇಶಪಾಂಡೆ ತಿಳಿಸಿದ್ದಾರೆ.

ಅಂತೆಯೇ ಸಮಿತಿಯು ಸೆಂಚ್ಯೂರಿಯನ್ ಸಾಫ್ಟ್ ವೇರ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಯೋಜನೆ ವಿಸ್ತರಣೆಗೆ 559 ಕೋಟಿ ರು. ಬಂಡವಾಳ ಹೂಡಲು ಅನುಮೋದನೆ ನೀಡಿದ್ದು, ಅಂತೆಯೇ ಮಂಜುನಾಥ ಎಜುಕೇಷನ್  ಫೌಂಡೇಷನ್ ಸಂಸ್ಥೆಯ ಮನವಿ ಮೇರೆಗೆ ಹಾಸನದಲ್ಲಿನ ಸುಮಾರು 40 ಎಕರೆ ಪ್ರದೇಶದಲ್ಲಿ 515 ಕೋಟಿ ರು.ವೆಚ್ಚದಲ್ಲಿ ಮೆಡಿಕಲ್ ಕಾಲೇಜು, ಸಂಶೋಧನಾ ಕೇಂದ್ರ ಸ್ಥಾಪನೆಗೆ ಬಂಡವಾಳ ಹೂಡಲು ಕೂಡ ಸಮಿತಿ ಸಮ್ಮತಿ  ಸೂಚಿಸಿದೆ. ಇನ್ನು ಕೊಪ್ಪಳದ ಮುಕುಂದ್ ಸ್ಟೀಲ್ ಸಂಸ್ಥೆಯ ಉತ್ಪಾದನಾ ಪ್ರಮಾಣ ಹೆಚ್ಚಿಸುವ ನಿಟ್ಟನಲ್ಲಿ ರು,2,892 ಬಂಡವಾಳ ತೊಡಗಿಸಲು ನಿರ್ಧರಿಸಲಾಗಿದ್ದು, ಇದರಿಂದ ಸುಮಾರು 720 ಹೊಸ ಉದ್ಯೋಗಗಳು  ಸೃಷ್ಟಿಯಾಗುತ್ತದೆ ಎಂದು ಅಂದಾಜಿಸಲಾಗಿದೆ.

ಕಬಿನಿ, ಹಿಡ್ಕಲ್ ನಲ್ಲಿ ಡ್ಯಾಮ್ ಟೂರಿಸಂಗೆ ಒತ್ತು
ಇದೇ ವೇಳೆ ನೀರಾವರಿ ಇಲಾಖೆಯ ಪ್ರಸ್ತಾವನೆ ಮೇರೆಗೆ ಡ್ಯಾಂಗಳನ್ನು ಪ್ರಮುಖ ಆಕರ್ಷಣೀಯ ಕೇಂದ್ರಗಳಾಗಿ ಮಾರ್ಪಡಿಸಲು ನಿರ್ಧರಿಸಲಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಡ್ಯಾಂಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಅಬಿವೃದ್ಧಿ  ಪಡಿಸಿ ಪ್ರವಾಸೋಧ್ಯಮಕ್ಕೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ಕಬಿನಿ, ಹಿಡ್ಕಲ್, ಗೊರೂರು ಮತ್ತು ಭದ್ರಾ ಜಲಾಶಯಗಳನ್ನು ಈ ಯೋಜನೆಗಾಗಿ ಆಯ್ಕೆ ಮಾಡಲಾಗಿದ್ದು, ಜಲ ಕ್ರೀಡೆ, ಸಂಗೀತ ಕಾರಂಜಿ, ಫುಡ್  ಕೋರ್ಟ್ ಗಳು, ಸಾಮಾನ್ಯ ಮೂಲಭೂತ ಸೌಕರ್ಯಗಳಿಗಾಗಿ ಹಣ ಬಿಡುಗಡೆ ಮಾಡಲಾಗಿದೆ. ಜಲಾಶಯಗಳನ್ನು ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿ ಮಾರ್ಪಡಿಸುವುದೇ ಈ ಯೋಜನೆ ಮುಖ್ಯ ಉದ್ದೇಶವಾಗಿದೆ ಎಂದು  ದೇಶಪಾಂಡೆ ತಿಳಿಸಿದ್ದಾರೆ.

3 ವಿಮಾನ ನಿಲ್ದಾಣಗಳಿಗೆ ಕಾಯಕಲ್ಪ
ಇದೇ ವೇಳೆ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಮತ್ತು ವಿಮಾನ ನಿಲ್ದಾಣಗಳ ಪ್ರಾಧಿಕಾರ ಸಹಭಾಗಿತ್ವದಲ್ಲಿ ರಾಜ್ಯದ ಮೈಸೂರು, ಬಳ್ಳಾರಿ ಮತ್ತು ಬೀದರ್ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವ ಮಹತ್ವದ  ಕಡತಕ್ಕೆ ರಾಜ್ಯ ಸರ್ಕಾರ ಸಹಿ ಹಾಕಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯಡಲ್ಲಿ ಈ ಮೂರು ನಿಲ್ದಾಣಗಳ ಅಭಿವೃದ್ಧಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com