ಡಿಕೆ ಶಿವಕುಮಾರ್ ಗೆ ಸೇರಿದ 27 ಬ್ಯಾಂಕ್ ಖಾತೆಗಳು ಜಪ್ತಿ!

ಇತ್ತೀಚೆಗಷ್ಟೇ ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿಗೊಳಗಾಗಿದ್ದ ಇಂಧನ ಸಚಿವ ಡಿತೆ ಶಿವಕುಮಾರ್ ಅವರಿಗೆ ಐಟಿ ಇಲಾಖೆ ಮತ್ತೊಂದು ಶಾಕ್ ನೀಡಿದ್ದು, ಡಿಕೆಶಿ ಮತ್ತು ಮತ್ತು ಅವರ ಕುಟುಂಬಸ್ಥರಿಗೆ ಸೇರಿದ್ದು ಎನ್ನಲಾದ ಸುಮಾರು 27 ಬ್ಯಾಂಕ್ ಖಾತೆಗಳನ್ನು ಇಲಾಖೆ ಜಪ್ತಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಇತ್ತೀಚೆಗಷ್ಟೇ ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿಗೊಳಗಾಗಿದ್ದ ಇಂಧನ ಸಚಿವ ಡಿತೆ ಶಿವಕುಮಾರ್ ಅವರಿಗೆ ಐಟಿ ಇಲಾಖೆ ಮತ್ತೊಂದು ಶಾಕ್ ನೀಡಿದ್ದು, ಡಿಕೆಶಿ ಮತ್ತು ಮತ್ತು ಅವರ ಕುಟುಂಬಸ್ಥರಿಗೆ ಸೇರಿದ್ದು  ಎನ್ನಲಾದ ಸುಮಾರು 27 ಬ್ಯಾಂಕ್ ಖಾತೆಗಳನ್ನು ಇಲಾಖೆ ಜಪ್ತಿ ಮಾಡಿದೆ.

ಡಿಕೆಶಿವಕುಮಾರ್ ಮತ್ತು ಅವರ ಸಂಬಂಧಿಕರು ಮತ್ತು ಆಪ್ತರಿಗೆ ಸೇರಿದ್ದು ಎನ್ನಲಾದ 27 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ವಿಚಾರಣೆಗೆ  ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ ಎನ್ನಲಾಗಿದೆ. ಶಿವಕುಮಾರ್ ಅವರ ಸದಾಶಿವನಗರದ ಕೆಂಕೆರೆ ನಿವಾಸದ ಮೇಲೆ ಆಗಸ್ಟ್ 2ರಿಂದ ನಾಲ್ಕು ದಿನಗಳ ಕಾಲ ನಡೆದ ಕಾರ್ಯಾಚರಣೆಯ ವೇಳೆ ಅನುಮಾನಾಸ್ಪದ ಹಣಕಾಸು  ವಹಿವಾಟು ಪತ್ತೆಯಾದ ಹಿನ್ನೆಲೆಯಲ್ಲಿ ಈ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಈ ಖಾತೆಗಳ ಮೂಲಕ ಯಾವುದೇ ರೀತಿಯ ಹಣಕಾಸು ವ್ಯವಹಾರ ನಡೆಸದಂತೆ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ. ಇನ್ನುಳಿದಂತೆ ಕೆಲ ಬ್ಯಾಂಕ್ ಖಾತೆಗಳಲ್ಲಿ ವಹಿವಾಟು ಮುಂದುವರಿಸಲು ಅವಕಾಶ ನೀಡಲಾಗಿದೆಯಾದರೂ  ಅವುಗಳ ಮೇಲೆ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅನುಮಾನಾಸ್ಪದ ವಹಿವಾಟು ಕಂಡುಬಂದರೆ ಅವುಗಳನ್ನೂ ಕೂಡ ಜಪ್ತಿ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಐಟಿ ಮೂಲಗಳ ಪ್ರಕಾರ ಶಿವಕುಮಾರ್ ಅಂದಾಜು 27 ಬ್ಯಾಂಕ್ ಖಾತೆ ಹೊಂದಿದ್ದಾರೆ ಎನ್ನಲಾಗಿದೆ. ವಿವಿಧ ಬ್ಯಾಂಕ್​ ಗಳಲ್ಲಿ ಉಳಿತಾಯ ಹಾಗೂ ಚಾಲ್ತಿ ಖಾತೆಗಳ ಮುಖಾಂತರ ವ್ಯವಹಾರ ನಡೆಸುತ್ತಿದ್ದು, ಡಿಕೆಶಿ ಮಾತ್ರವಲ್ಲದೆ  ಅವರ ಕುಟುಂಬ ಸದಸ್ಯರು, ಸಂಬಂಧಿಕರು ಹಾಗೂ ಸ್ನೇಹಿತರ ಖಾತೆಗಳ ಮೇಲೂ ಕಣ್ಣಿಟ್ಟಿರುವ ಐಟಿ ಅಧಿಕಾರಿಗಳು ವಹಿವಾಟಿನ ಪರಿಶೀಲನೆಯಲ್ಲಿ ತೊಡಗಿದ್ದಾರೆ. ದೊಡ್ಡ ಮೊತ್ತದ ಹಣ ವರ್ಗಾವಣೆ ಹಾಗೂ ಅದಕ್ಕೆ ಸಂಬಂಧಿಸಿದ  ದಾಖಲೆಗಳನ್ನು ತಾಳೆಹಾಕುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.

ಡಿಕೆಶಿವಕುಮಾರ್ ಮನೆಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಬೇನಾಮಿ ಕಂಪನಿಗಳು ಹಾಗೂ ವಿದೇಶಿ ಹೂಡಿಕೆಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳು ಇದರಲ್ಲಿ ಸೇರಿಕೊಂಡಿವೆ ಎನ್ನಲಾಗಿದೆ. ಬೇನಾಮಿ ಕಂಪನಿಗಳಿಗೆ  ಸಂಬಂಧಿಸಿದ ಖಾತೆಗಳ ವಹಿವಾಟು ಹಾಗೂ ಅದರ ಆದಾಯದ ಮೂಲ ತಾಳೆಯಾಗದ ಕಾರಣ ಅಂತಹ ಖಾತೆಗಳ ವ್ಯವಹಾರ ಸ್ಥಗಿತಗೊಳಿಸುವುದು ಐಟಿ ಅಧಿಕಾರಿಗಳ ಮುಖ್ಯ ಉದ್ದೇಶವಾಗಿದೆ.

ಇತ್ತೀಚೆಗಷ್ಟೇ ಮುಕ್ತಾಯವಾದ ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನ ಅಹಮದ್ ಪಟೇಲ್ ಗೆಲುವಿನಲ್ಲಿ ಪ್ರಮುಖ ಸೂತ್ರಧಾರಿ ಎಂದೇ ಹೈಕಮಾಂಡ್​ನಿಂದ ಶಹಬ್ಬಾಸ್​ ಗಿರಿ ಪಡೆದು ಬೀಗುತ್ತಿರುವ ಇಂಧನ ಸಚಿವ  ಡಿ.ಕೆ.ಶಿವಕುಮಾರ್​ಗೆ ಇತ್ತ ಐಟಿ ಇಲಾಖೆ ಇದೀಗ ಮತ್ತೊಂದು ಆಘಾತ ನೀಡಿದಂತಾಗಿದೆ.

ಮತ್ತೆ ವಿಚಾರಣೆ ಸಾಧ್ಯತೆ
ಸೋಮವಾರವಷ್ಟೇ ಸಚಿವ ಡಿಕೆ ಶಿವಕುಮಾರ್ ಮತ್ತು ಸಹೋದರ ಡಿ.ಕೆ.ಸುರೇಶ್, ಮಾವ ತಮ್ಮಯ್ಯ, ವಿಧಾನಪರಿಷತ್ ಸದಸ್ಯ ರವಿ, ಗುರು ದ್ವಾರಕಾನಾಥ್ ಅವರು ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ 3 ಗಂಟೆಗಳ ಕಾಲ  ವಿಚಾರಣೆ ಎದುರಿಸಿದ್ದರು. ಈ ವೇಳೆ ಐಟಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದು, ಸೂಕ್ತ ದಾಖಲೆ ಒದಗಿಸಿರುವುದಾಗಿ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ಆದರೆ ಮತ್ತೊಮ್ಮೆ ಈ ಎಲ್ಲರಿಗೆ ಸಮನ್ಸ್  ನೀಡಲಾಗಿದೆ ಎನ್ನಲಾಗಿದ್ದು, ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com