ರುಪ್ಪೀಸ್ ರೆಸಾರ್ಟ್ ನಲ್ಲಿ ಉಪ್ಪೀಸ್ "ಪ್ರಜಾಕೀಯ" ಘೋಷಣೆ

ತೀವ್ರ ಕುತೂಹಲ ಕೆರಳಿಸಿದ್ದ ನಟ ಉಪೇಂದ್ರ ರಾಜಕೀಯ ಪ್ರವೇಶ ಅಂತೂ ಅಧಿಕೃತವಾಗಿದ್ದು, ಸ್ವತಃ ನಟ ಉಪೇಂದ್ರ ಅವರು ಸುದ್ದಿಗೋಷ್ಟಿ ಕರೆದು ತಮ್ಮ ರಾಜಕೀಯ ಪ್ರವೇಶದ ಕುರಿತು ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಟ ಉಪೇಂದ್ರ
ಸುದ್ದಿಗೋಷ್ಠಿಯಲ್ಲಿ ನಟ ಉಪೇಂದ್ರ

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ನಟ ಉಪೇಂದ್ರ ರಾಜಕೀಯ ಪ್ರವೇಶ ಅಂತೂ ಅಧಿಕೃತವಾಗಿದ್ದು, ಸ್ವತಃ ನಟ ಉಪೇಂದ್ರ ಅವರು ಸುದ್ದಿಗೋಷ್ಟಿ ಕರೆದು ತಮ್ಮ ರಾಜಕೀಯ ಪ್ರವೇಶದ ಕುರಿತು ಮಾಹಿತಿ ನೀಡಿದ್ದಾರೆ.

ನಗರದ ಹೊರವಲಯದ ತಾವರೆಕೆರೆ ಸಮೀಪದಲ್ಲಿರುವ ರುಪ್ಪೀಸ್ ರೆಸಾರ್ಟ್ ನಲ್ಲಿ ಸುದ್ದಿಗೋಷ್ಠಿ ಕರೆದಿದ್ದ ನಟ ಉಪೇಂದ್ರ ತಮ್ಮ ಹೊಸ ಪ್ರಜಾಕೀಯ ಯೋಜನೆ ಕುರಿತು ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದರು. ಈ ವೇಳೆ  ಮಾತನಾಡಿದ ನಟ ಉಪೇಂದ್ರ, "ಜಾತಿ, ಧರ್ಮ, ದುಡ್ಡು, ಖ್ಯಾತಿ ಇರುವವರಿಗೆ ಮನ್ನಣೆ ನೀಡಲಾಗುತ್ತಿದೆ. ವೋಟ್ ಬ್ಯಾಂಕ್ ರಾಜಕೀಯ ನಮಗೆ ಬೇಕಾಗಿಲ್ಲ. ಜನರ ಜತೆ ಕೆಲಸ ಮಾಡಬೇಕಾದ ಅನಿರ್ವಾಯತೆ ಇದೆ. ಟೆಕ್ನಾಲಜಿ  ಇದೆ. ಹೀಗಾಗಿ ಬಹಿರಂಗ ಸಭೆ ಮೂಲಕವೇ ಜನರನ್ನು ಸಂಪರ್ಕಿಸಬೇಕು ಎನ್ನುವ ಅನಿವಾರ್ಯತೆ ಇಲ್ಲ. ಖಂಡಿತ ನಾವು ಜನರನ್ನು ತಲುಪಬಹುದು ಎಂದು ಹೇಳಿದ್ದಾರೆ.

"ನಮಗೆ ಪ್ರಜಾಕೀಯ, ಪ್ರಜಾಕಾರಣ, ಪ್ರಜಾಪ್ರಭುತ್ವ ಬೇಕಾಗಿದೆ. ರಾಜಕೀಯ ಅಥವಾ ರಾಜಕಾರಣ ಅಲ್ಲ. ರಾಜಕೀಯಕ್ಕೆ ಹಣ ಅನಿವಾರ್ಯವಾಗರಬಹುದು ಆದರೆ ಪ್ರಜಾಕೀಯಕ್ಕೆ ಹಣ ಬೇಕಿಲ್ಲ ಎಂದು ನನಗನ್ನಿಸುತ್ತದೆ.  ಮಾಧ್ಯಮಗಳ ಯುಗ ಹಾಗೂ ಸಾಮಾಜಿಕ ಜಾಲತಾಣಗಳ ಸಾಕಷ್ಟು ಮುಂದುವರೆದಿವೆ. ತಂತ್ರಜ್ಞಾನ ಬೆಳದಿದೆ. ಈಗಲೂ ಸಮಾವೇಶಗಳನ್ನು ಯಾಕೆ ನಡೆಸುತ್ತಾರೋ ಗೊತ್ತಿಲ್ಲ. ಒಂದು ಕಾಲದಲ್ಲಿ ಇಷ್ಟೊಂದು ಟಿವಿ ಚಾನೆಲ್  ಇರಲಿಲ್ಲ. ಆಗ ಸಮಾಜಿಕ ಜಾಲತಾಣಗಳ ಪರಿಕಲ್ಪನೆಯೇ ಇರಲಿಲ್ಲ.  ಅಂದು ರ‍್ಯಾಲಿ ಮಾಡಿ ಭಾಷಣ ಮಾಡುವ ಪರಿಸ್ಥಿತಿ ಇತ್ತು. ಆದ್ರೆ ಈಗ ರ‍್ಯಾಲಿ ಮಾಡಿ ಅದನ್ನೇ ಟಿವಿಯಲ್ಲಿ ನೋಡ ಬೇಕೇ? ಜಾತಿ, ದುಡ್ಡು, ಹಣ, ಧರ್ಮ ನೋಡಿ  ಮತ ಹಾಕ ಬೇಕೇ?" ಎಂದು ಉಪ್ಪಿ ಪ್ರಶ್ನಿಸಿದರು.

ಅಂತೆಯೇ "ರಾಜಕಾರಣಿಯಾಗಬೇಕಾದರೆ ಮೊದಲು ಅರ್ಹತೆ ಮುಖ್ಯವಾಗಬೇಕಾಗುತ್ತದೆ. ಹಣಬಲ, ಜಾತಿ ಬಲ ಇಲ್ಲದೆ ಗೆಲ್ಲಲು ಆಗುವುದಿಲ್ಲ ಎನ್ನುತ್ತಿದ್ದಾರೆ. ಆದರೆ ನೈಜ ಪರಿಸ್ಥಿತಿ ಹಾಗಿಲ್ಲ. ನಮ್ಮ ದೇಶದಲ್ಲಿ ಇರುವುದು  ಪ್ರಜಾಪ್ರಭುತ್ವ ಹಾಗಾಗಿ ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ರಾಜ. ಎಲ್ಲರೂ ಪ್ರತಿವರ್ಷ ಜನರು ಸರ್ಕಾರಕ್ಕೆ ತೆರಿಗೆ ಸಲ್ಲಿಸುತ್ತಾರೆ. ನಮ್ಮ ಬಜೆಟ್ ಆಗೋದೆ ಅದ್ರಿಂದ. . ಜನ ಕೊಡ್ತಿರೋ ತೆರಿಗೆ ಸಮರ್ಪಕವಾಗಿ ಖರ್ಚಾಗಬೇಕು.  ನನ್ನ  ಪ್ರಕಾರ ಜನರು ಶ್ರೀಸಾಮಾನ್ಯರಲ್ಲ, ನನ್ನ ಪ್ರಕಾರ ಅಸಾಮಾನ್ಯರು ಎಂದು ವಿಶ್ಲೇಷಿಸಿದರು.

ಹೊಸ ಪಕ್ಷ ಕಟ್ಟಲು ಉಪ್ಪಿ ನಿರ್ಧಾರ
ಇದೇ ವೇಳೆ ತಾವು ಯಾವುದೇ ರಾಜಕೀಯ ಪಕ್ಷ ಸೇರುವ ವಿಚಾರ ಕುರಿತು ಮಾತನಾಡಿದ ನಟ ಉಪೇಂದ್ರ, ನಾನು ಕೂಡ ನಿಮ್ಮಂತೆಯೇ ರಾಜಕೀಯ ಪಕ್ಷ ಸೇರುವ ಕುರಿತು ಪತ್ರಿಕೆಗಳಲ್ಲಿ ಓದಿದ್ದೇನೆ. ಆದರೆ ನಾನು ಯಾವುದೇ  ರಾಜಕೀಯ ಪಕ್ಷ ಸೇರುತ್ತಿಲ್ಲ. ನಾನು ಹೊಸ ಪಕ್ಷ ಕಟ್ಟಲು ನಿರ್ಧರಿಸಿದ್ದೇನೆ. ಆದರೆ ಹೊಸ ಪಕ್ಷದ ಹೆಸರೇನು? ಅದರ ಚಿಹ್ನೆ ಏನು ಎಂಬುದು ಈಗಲೇ ಹೇಳಲು ಸಾಧ್ಯವಿಲ್ಲ. ಚುನಾವಣಾ ಆಯೋಗಕ್ಕೆ ಈಗಾಗಲೇ ಮನವಿ  ಸಲ್ಲಿಸಲಾಗಿದೆ. ಅಲ್ಲಿಂದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ಅಧಿಕೃತವಾಗಿ ಘೋಷಣೆ ಮಾಡುತ್ತೇನೆ ಎಂದು ಹೇಳಿದರು.

ಸಮರ್ಥರಿಗೆ ಮಾತ್ರ ಮಣೆ
ಇದೇ ವೇಳೆ ತಮ್ಮ ಪ್ರಜಾಕೀಯದಲ್ಲಿ ಸಮರ್ಥರಿಗೆ ಮಾತ್ರ ಮಣೆಹಾಕಲಿದ್ದು, ಕೆಲಸ ಮಾಡಲು ಸಮರ್ಥರಾಗಿದ್ದರೆ ಮಾತ್ರ ಅವರನ್ನು ಆಯ್ಕೆ ಮಾಡುತ್ತೇವೆ. ಇದಕ್ಕಾಗಿ ಹೊಸ ವೇದಿಕೆ ಸೃಷ್ಟಿಸಲಾಗಿದ್ದು, ಮೂರು ಜಿಮೇಲ್  ಖಾತೆಗಳನ್ನು ತೆರೆಯಲಾಗಿದೆ. ಜಿಮೇಲ್ ನಲ್ಲಿ ಯಾರು ನಮ್ಮ ತಂಡ ಸೇರಲು ಬಯಸುತ್ತಾರೋ ಅವರು ತಮ್ಮ ಯೋಜನೆಗಳನ್ನು ವಿವರಿಸಿ. ಸಮಸ್ಯೆ ನಿವಾರಿಸುವ ಅವರ  ಹೊಸ ಆಲೋಚನೆಗದಳ ಆಧಾರದ ಮೇಲೆ ಅವರನ್ನು  ಆಯ್ಕೆ ಮಾಡಲಾಗುತ್ತದೆ. ಅಂತೆಯೇ ಯಾರೇ ಆದರೂ ತಮ್ಮ ತಮ್ಮ ಆಲೋಚನೆಗಳನ್ನು ಈ ವೇದಿಕೆ ಮೂಲಕ ಹಂಚಿಕೊಳ್ಳಬಹುದು. ಜನರ ದುಡ್ಡು ಎಲ್ಲೂ ಪೋಲಾಗದೆ ಖರ್ಚಾಗಬೇಕು ಎನ್ನುವುದು ನಮ್ಮ ಹೆಬ್ಬಯಕೆ. ಅದರಂತೆ   ವ್ಯಕ್ತಿಗೆ ಕೆಲಸ ಮಾಡುವ ತಾಕತ್ತಿದ್ಯಾ ಅಂತ ನೋಡಿ ಮತ ನೀಡಬೇಕು. ನಮ್ಮ ಮನೆಯಲ್ಲಿ ಕೆಲಸ ಮಾಡುವವರ ಜಾತಿ ನೋಡ್ತೇವಾ? ಅದೇ ರೀತಿ ನಮ್ಮ ಕೆಲಸ ಮಾಡಲು ಶಾಸಕರು, ಜನನಾಯಕರು ಸಮರ್ಥರಾಗಿದ್ದಾರೆಯೇ  ಎಂಬುದನ್ನು ಮಾತ್ರ ನಾವು ನೋಡುತ್ತೇವೆ, ಅದಕ್ಕಾಗಿ ಸಮರ್ಥರು ಮಾತ್ರ ಶಾಸಕರು, ಸಂಸದರು ಆಗಿ ಆಯ್ಕೆಯಾಗಬೇಕು ಎಂದು ಹೇಳಿದರು.

ನಾನು ಕಾರ್ಮಿಕ ಅದಕ್ಕಾಗಿ ಖಾಕಿ ಬಟ್ಟೆ ಹಾಕಿದ್ದೇನೆ
ನಾನು ಕೆಲಸಗಾರ ಅದಕ್ಕಾಗಿ ಖಾಕಿ ಬಟ್ಟೆ ಹಾಕಿಕೊಂಡು ಬಂದಿದ್ದೇನೆ. ಸ್ವಚ್ಛ ಭಾರತದಂತೆ ಸ್ವಚ್ಛ ಆಡಳಿತ ನನ್ನ ಉದ್ದೇಶವಾಗಿದ್ದು, ಸ್ವ ಇಚ್ಛೆಯಿಂದ ಪ್ರಜಾಕೀಯ ಪಕ್ಷ ಕಟ್ಟುತ್ತಿದ್ದೇನೆ. ನಮ್ಮ ದೇಶದಲ್ಲಿ ಇರುವುದು ಪ್ರಜಾಪ್ರಭುತ್ವ.  ಕೆಳಮಟ್ಟದಿಂದ ಬದಲಾವಣೆ ತರಬೇಕಾಗಿದೆ. ಇದಕ್ಕಾಗಿ ಮೊದಲ ಹೆಜ್ಜೆ ನಾನು ಇಟ್ಟಿದ್ದೇನೆ. ನಾನು ನಾಯಕನೂ ಅಲ್ಲ, ಸೇವಕನೂ ಅಲ್ಲ, ನಾನು ಕಾರ್ಮಿಕ. ನನ್ನ ಪಕ್ಷಕ್ಕೆ ಬರುವವರು, ಸ್ವ ವಿವರ ಕಳುಹಿಸಿಯ ಅಂತೆಯೇ  ನಿಮ್ಮಲ್ಲಿರುವ ಹೊಸ ಐಡಿಯಾಗಳನ್ನು, ಯೋಜನೆಗಳನ್ನು, ಹೊಸ ಆಲೋಚನೆಗಳನ್ನು ಇ ಮೇಲ್ ಐಡಿ: Prajakarana1@gmail.com, Prajakarana2@gmail.com, prajakarana3@gmail.comಯಲ್ಲಿ  ಹಂಚಿಕೊಳ್ಳಬಹುದು. ನಿಮ್ಮೊಂದಿಗೆ ಚರ್ಚಿಸಿಯೇ ನಾನು ಮುಂದುವರಿಯುತ್ತೇನೆ ಎಂದು ಉಪೇಂದ್ರ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com