ಎಂ.ಎಸ್. ರಾಮಯ್ಯ ಆಸ್ಪತ್ರೆ ರಸ್ತೆಯ ನಾಯಿಗಳ ಹಾವಳಿಗೆ ಬಿಬಿಎಂಪಿ ಬ್ರೇಕ್ ; 10ಕ್ಕೂ ಹೆಚ್ಚು ನಾಯಿಗಳು ಬಲೆಗೆ!
ಬೆಂಗಳೂರು: ನಗರದ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಾರಿಹೋಕರಿಗೆ ದುಸ್ವಪ್ನವಾಗಿ ಕಾಡುತ್ತಿದ್ದ ಬೀದಿ ನಾಯಿಗಳ ಹಾವಳಿಗೆ ಕೊನೆಗೂ ಬಿಬಿಎಂಪಿ ಅಧಿಕಾರಿಗಳು ಬ್ರೇಕ್ ಹಾಕಿದ್ದು, ಗುರುವಾರ ಬೆಳಗ್ಗೆಯೇ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ 10ಕ್ಕೂ ಹೆಚ್ಚು ನಾಯಿಗಳನ್ನು ಸೆರೆ ಹಿಡಿದು ಕರೆದೊಯ್ದಿದ್ದಾರೆ.
ನಿನ್ನೆಯಷ್ಟೇ ನಗರದ ಎಂಎಸ್ ರಾಮಯ್ಯ ಆಸ್ಪತ್ರೆ ರಸ್ತೆಯಲ್ಲಿ ಸುಮಾರು 15ಕ್ಕೂ ಹೆಚ್ಚು ನಾಯಿಗಳು ದಾರಿ ಹೋಕರ ಮೇಲೆ ದಾಳಿ ಮಾಡಿದ್ದ ವಿಡಿಯೋಗಳು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಾಧ್ಯಮಗಳಲ್ಲಿ ಬಿಬಿಎಂಪಿ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅಧಿಕಾರಿಗಳು ಇಂದು ಬೆಳಗ್ಗೆಯೇ ನಾಯಿ ಹಿಡಿಯುವ ವಾಹನವನ್ನು ಘಟನಾ ಸ್ಥಳಕ್ಕೆ ರವಾನಿಸಿದ್ದರು. ಮೂರು ಜನರ ತಂಡ ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಿ ದಾಳಿಕೋರ ನಾಯಿಗಳನ್ನು ಸೆರೆ ಹಿಡಿದಿದ್ದಾರೆ.
ಮೂಲಗಳ ಪ್ರಕಾರ ಕಾರ್ಯಾಚರಣೆ ವೇಳೆ ಸಿಬ್ಬಂದಿ ಸುಮಾರು 10ಕ್ಕೂ ಹೆಚ್ಚು ನಾಯಿಗಳನ್ನು ಸೆರೆ ಹಿಡಿದಿದ್ದು, ದಾರಿಹೋಕರನ್ನು ಕಚ್ಚುತ್ತಿದ್ದ ಕಂದು ಬಣ್ಣದ ನಾಯಿಗಾಗಿ ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಆ ರಸ್ತೆಯಲ್ಲಿ ಮಾತ್ರವಲ್ಲದೆ ಅದೇ ಪ್ರದೇಶದ ಅಕ್ಕಪಕ್ಕದ ರಸ್ತೆಗಳಲ್ಲಿರುವ ಬೀದಿನಾಯಿಗಳನ್ನೂ ಕೂಡ ಹಿಡಿಯುವುದಾಗಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಎಂ.ಎಸ್.ರಾಮಯ್ಯ ಆಸ್ಪತ್ರೆ ರಸ್ತೆಯಲ್ಲಿ ಹತ್ತಾರು ಮಂದಿಗೆ ಕಚ್ಚಿದ್ದ ನಾಯಿಗಳ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ನಗರದ ಜೆಪಿನಗರ, ಮೆಜೆಸ್ಟಿಕ್, ಶಿವಾಜಿನಗರ ಸೇರಿದಂತೆ ಕೆಲ ಪ್ರದೇಶಗಳಲ್ಲೂ ನಾಯಿ ಕಡಿದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಕಳೆದ ಮಂಗಳವಾರ ಗುಲ್ಬರ್ಗ ಮೂಲದ ಜ್ಯೋತಿ ಎಂಬುವವರು ಮನೆ ಕೆಲಸ ಮುಗಿಸಿಕೊಂಡು ಸಹೋದರಿಯೊಂದಿಗೆ ಬರುವ ವೇಳೆ ಸುಮಾರು ಹತ್ತು ನಾಯಿಗಳು ಏಕಾಏಕಿ ದಾಳಿ ನಡೆಸಿದ್ದು, ಜ್ಯೋತಿಯವರ ಕಾಲಿಗೆ ಗಾಯಗಳಾಗಿವೆ. ಬುಧವಾರ ಓರ್ವ ಯುವಕ ಹಾಗೂ ವೃದ್ಧ ಸೇರಿದಂತೆ ಹಲವು ಮಂದಿಯ ಮೇಲೆ ದಾಳಿ ನಡೆಸಿವೆ ಎಂದು ತಿಳಿದುಬಂದಿದೆ.

