ಬೆಂಗಳೂರು: ಅಮೆರಿಕಾದ ವಿಶ್ವ ಪ್ರಸಿದ್ಧ ನಯಾಗರ ಜಲಪಾತವನ್ನು ನೋಡುವ ಹಂಬಲ ಎಲ್ಲರಿಗೂ ಇರುತ್ತದೆ. ಅಂತಹ ಸೋಬಗವನ್ನು ಇನ್ನುಂದೆ ಬೆಂಗಳೂರಿಗರು ನೋಡಿ ಅನುಭವಿಸಬಹುದು.
ಹೌದು ಬೆಂಗಳೂರಿನ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಮಿನಿ ನಯಾಗರ ಫಾಲ್ಸ್ ನಿರ್ಮಾಣವಾಗಿದ್ದು ಡಿಸೆಂಬರ್ ಅಥವಾ ಜನವರಿ ವೇಳೆಗೆ ಪ್ರವಾಸಿಗರ ವೀಕ್ಷಣೆಗೆ ಲಭ್ಯವಾಗಲಿದೆ.
1.80 ಕೋಟಿ ರುಪಾಯಿ ವೆಚ್ಚದಲ್ಲಿ ಲಾಲ್ ಬಾಗ್ ನಲ್ಲಿ ಮಿನಿ ನಯಾಗರ ಫಾಲ್ಸ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಕಳೆದ ಒಂದು ವರ್ಷದಿಂದ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಇದೀಗ ಅಂತಿಮ ಹಂತ ತಲುಪಿದೆ.
ಇಂದು ನಡೆದ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಿನಿ ನಯಾಗರ ಫಾಲ್ಸ್ ಅನ್ನು ವೀಕ್ಷಿಸಿದರು. ಇದೇ ವೇಳೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದು ಮಿನಿ ನಯಾಗರ ಫಾಲ್ಸ್ ಸೋಬಗನ್ನು ಕಣ್ಮುಂಬಿಕೊಂಡರು.
ಸುಮಾರು 20 ಅಡಿ ಎತ್ತರವಾಗಿ ಗೋಡೆಯೊಂದನ್ನು ನಿರ್ಮಿಸಿದ್ದು 240 ಅಶ್ವಶಕ್ತಿ ಬಳಸಿ ನೀರನ್ನು ಪಂಪ್ ಮಾಡುವ ಮೂಲಕ ನಯಾಗರ ಫಾಲ್ಸ್ ಮಾದರಿ ರೀತಿ ಮಾಡಲಾಗಿದೆ. ಲಾಲ್ ಬಾಗ್ ನ ಕೆರೆಗಳಿಂದಲೇ ಮಿನಿ ಫಾಲ್ಸ್ ಗೆ ಅಗತ್ಯ ನೀರು ಪೂರೈಕೆ ಮಾಡಲಾಗುತ್ತದೆ.