ಕಲಬುರಗಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿ, ಬಳಿಕ ಆಕೆಯನ್ನು ಕೊಲೆ ಮಾಡಿದ ಆರೋಪಿ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯ ಹೊರವಲಯದ ಕೊತನೂರು(ಡಿ) ಎಂಬ ಗ್ರಾಮದಲ್ಲಿ ನಡೆದಿದೆ.
ಸಂತ್ರಸ್ತ ಬಾಲಕಿ ಮತ್ತು ಆಕೆಯ ತಾಯಿ ಕೊತನೂರು ಗ್ರಾಮದಲ್ಲಿರುವ ಅವರ ಸಂಬಂಧಿ ಜಯರಾಜ್ ರಾಥೋಡ್ ಎಂಬುವನ ಮನೆಯಲ್ಲಿ ವಾಸವಿದ್ದರು. ಜಯರಾಜ್ ರಾಥೋಡ್ ಶೋರಾಪುರದಲ್ಲಿ ವೆಟರಿನರಿ ಇನ್ಸ್ ಪೆಕ್ಟರ್ ಆಗಿದ್ದರು
ಜಯರಾಜ್ ಸಹೋದರ ವಿಜಯ ಕುಮಾರ್ ಕೂಡ ಅದೇ ಮನೆಯಲ್ಲಿ ವಾಸವಿದ್ದ. ಸಂತ್ರಸ್ತ ಬಾಲಕಿ ತಾಯಿ ಮನೆಯಿಂದ ಹೊರಗೆ ತೆರಳಿದ್ದ ವೇಳೆ ವಿಜಯ್ ಕುಮಾರ್ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ, ನಂತರ ಮನೆಯ ಮುಂದಿನ ಬಾಗಿಲನ್ನು ಲಾಕ್ ಮಾಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಾಗಿಲು ಮುರಿದು ಒಳಗೆ ಬಂದು ನೋಡಿದಾಗ ತನ್ನ ಮಗಳು ಶವವಾಗಿ ನೆಲದ ಮೇಲೆ ಬಿದ್ದಿದ್ದಳು, ಆರೋಪಿ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದ ಎಂದು ಬಾಲಕಿ ತಾಯಿ ತಿಳಿಸಿದ್ದಾರೆ. ಈ ಸಂಬಂಧ ಬಾಲಕಿ ತಾಯಿ ಕಲಬುರಗಿ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.