ಮಂಗಳೂರು: ಮಂಗಳೂರು ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಆಲಡ್ಕ ಗ್ರಾಮದಲ್ಲಿ ಎಂಡೋಸಲ್ಫನ್ ಪೀಡಿತ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಗುರುವಾರ ನಡೆದಿದೆ.
ಇಂದು ಬೆಳಗ್ಗೆ ನಾಲ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರು ಬಾಬುಗೌಡ(62), ಸದಾನಂದ(32), ಗಂಗಮ್ಮ(55) ಹಾಗೂ ನಿತ್ಯಾನಂದ(30) ಎಂದು ಗುರುತಿಸಲಾಗಿದೆ. ಮೂವರ ಶವಗಳು ಕೆರೆಯಲ್ಲಿ ಪತ್ತೆಯಾಗಿದ್ದು, ನಿತ್ಯಾನಂದನ ದೇಹ ಇನ್ನೂ ಸಿಕ್ಕಿಲ್ಲ. ಆತನ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.