

ಬೆಂಗಳೂರು: ವಕೀಲರೊಬ್ಬರ ಮೇಲೆ ಶೂಟೌಟ್ ನಡೆಸಿ ಹತ್ಯೆ ಮಾಡಿದ್ದ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದ್ದು, ವಕೀಲರನ್ನು ಆಸ್ಪತ್ರೆಗೆ ಸೇರಿಸಿದ್ದ ಮಹಿಳೆ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶೃತಿ ಗೌಡ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದು, ಹತ್ಯೆಯಾದ ವಕೀಲ ಹಾಗೂ ಶೃತಿ ಗೌಡ ನಡುವೆ ಇದ್ದ ಅನೈತಿಕ ಸಂಬಂಧವೇ ಶೂಟೌಟ್ ಗೆ ಕರಾಣ ಎಂದು ತಿಳಿದುಬಂದಿದೆ.
ಸೋಲದೇವನಹಳ್ಳಿ ಸಮೀಪದ ಆಚಾರ್ಯ ಕಾಲೇಜು ಬಳಿ ವಕೀಲ ಅಮಿತ್ (34) ಮತ್ತು ಶೃತಿ ಗೌಡ (29) ಕಾರಿನಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದರು. ಮಧ್ಯಾಹ್ನ 3.30ರ ಸುಮಾರಿಗೆ ಶೃತಿ ಪತಿ ರಾಜೇಶ್ ಮತ್ತು ಮಾವ ಗೋಪಾಲಕೃಷ್ಣ ಇಬ್ಬರೂ ಕಾರಿನಲ್ಲಿ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಇಬ್ಬರನ್ನು ಕಂಡು ಕುಪಿತನಾದ ರಾಜೇಶ್ ರಿವಾಲ್ವರ್ ನಿಂದ ಅಮಿತ್ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ತಂದೆಯೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆಂದು ಮೂಲಗಳು ತಿಳಿಸಿವೆ.
ಗುಂಡಿನ ದಾಳಿಯಿಂದಾಗಿ ಅಮಿತ್ ಅವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಗ ಶೃತಿ ಅವರು ಅಮಿತ್ ನನ್ನು ಕಾರಿನಲ್ಲಿ ಕರೆದುಕೊಂಡು ತುಮಕೂರು ರಸ್ತೆಯ 8ನೇ ಮೈಲಿ ಸಮೀಪದ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅಮಿತ್ ಮೃತಪಟ್ಟಿದ್ದಾರೆ, ಬಳಿಕ ಆಸ್ಪತ್ರೆಯ ಸಿಬ್ಬಂದಿಗಳು ಅಮಿತ್ ಅವರನ್ನು ದಾಖಲು ಮಾಡಿದ್ದ ಶೃತಿ ಅವರಿಗಾಗಿ ಹುಡುಕಾಡಿದ್ದಾರೆ, ಸ್ಥಳದಲ್ಲಿ ಶೃತಿ ಕಾಣದ ಹಿನ್ನಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಪೀಣ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದಾದ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಯ ಸಮೀಪದ ವಸತಿಗೃಹವೊಂದರಲ್ಲಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡಿರುವ ಸುದ್ಧಿ ಬೆಳಕಿಗೆ ಬಂದಿತ್ತು.
ಬಳಿಕ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಶೃತಿಗೌಡ ಅವರ ಸುಳಿಸುವ ಗೊತ್ತಾಗಿದೆ. ಬಳಿಕ ಆತ್ಮಹತ್ಯೆಗೆ ಶರಣಾದ ಮಹಿಳೆಯ ಶವ ಪರಿಶೀಲನೆ ನಡೆಸಿದಾಗ ಅದು ಶೃತಿಗೌಡ ಎನ್ನುವುದು ಖಚಿತವಾಗಿದೆ.
ಇನ್ನು ಶೂಟೌಟ್ ಗೆ ಶೃತಿಗೌಡ ಮತ್ತು ಅಮಿತ್ ನಡುವಿನ ಅನೈತಿಕ ಸಂಬಂಧವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಆರೋಪಿಗಳಾದ ರಾಜೇಶ್ ಮತ್ತು ಗೋಪಾಲಕೃಷ್ಣರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ತನಿಖೆ ಪ್ರಗತಿಯಲ್ಲಿದ್ದು, ವಿಚಾರಣೆ ಬಳಿಕವಷ್ಟೇ ನಿಖರ ಕಾರಣಗಳು ತಿಳಿದುಬರಲಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.