

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ, ಅಪರಾಧ ಪ್ರಕರಣಗಳ ಆರೋಪಿಗಳಿಗೆ ಶ್ಯೂರಿಟಿ ನೀಡಿ ನ್ಯಾಯಾಲಯಗಳಿಗೆ ವಂಚಿಸುತ್ತಿದ್ದ ವಕೀಲ ಸೇರಿ 9 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ವಕೀಲ ಸೇರಿದಂತೆ ಒಟ್ಟು 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎನ್.ಪಿ.ಪ್ರಸನ್ನ ಕುಮಾರ್ ಯಲಹಂಕ ನಿವಾಸಿ, ಆಂಧ್ರದ ಚಿತ್ತೂರು ಜಿಲ್ಲೆಯ ಗುರುಪಲ್ಲಿಯ ಹರಿನಾಥ್ ರೆಡ್ಡಿ (27), ಅವರ ಪತ್ನಿ ಸುಧಾರಾಣಿ ಅಲಿಯಾಸ್ ಶೋಭಾರಾಣಿ (26), ವಕೀಲ ಕುಮಾರಸ್ವಾಮಿ ಲೇಔಟ್ ನಿವಾಸಿ (47), ನಾಗರಬಾವಿಯ ಜಿ.ವೆಂಕಟೇಶ್ (51), ಕೆಂಗೇರಿ ಉಪನಗರದ ಶ್ರೀನಿವಾಸ್ (45), ನಾಗದೇವನಹಳ್ಳಿಯ ಶಿವರಾಜ್ (38), ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಆಂಜನರೆಡ್ಡಿ (41), ಮೈಸೂರು ಜಿಲ್ಲೆಯ ಕೆ.ಆರ್.ನಗರದ ಎಚ್.ಎಸ್. ಕುಮಾರ್ (28), ಮಂಡ್ಯ ಜಿಲ್ಲೆಯ ಮಳವಳ್ಳಿಯ ಡಿ.ಕುಮಾರ್ (22) ಬಂಧಿತರು.
ಬಂಧಿತರ ಬಳಿ ಇದ್ದ ನಕಲಿ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಹಣಿ ಮತ್ತು ಮ್ಯೂಟೇಷನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್, ‘ಆರೋಪಿಗಳು ಬೆಂಗಳೂರು ನಗರದ ಕೆಳಹಂತದ ನ್ಯಾಯಾಲಯ, ದೇವನಹಳ್ಳಿ, ಆನೇಕಲ್, ತುಮಕೂರು ಹಾಗೂ ಮಧುಗಿರಿ ನ್ಯಾಯಾಲಯಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕೊಲೆ, ದರೋಡೆ, ಸುಲಿಗೆ, ಕಳ್ಳತನ ಹಾಗೂ ಇತರ ಅಪರಾಧ ಕೃತ್ಯಗಳ ಆರೋಪಿಗಳಿಗೆ ಶ್ಯೂರಿಟಿ ನೀಡಿರುವುದು ತಿಳಿದು ಬಂದಿದೆ.
ಈ ಗ್ಯಾಂಗ್ 2015 ರಿಂದ ದಂಧೆ ನಡೆಸುತ್ತಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಗಂಭೀರ ಸ್ವರೂಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದ ನ್ಯಾಯಾಲಯಗಳಲ್ಲಿ ಜಾಮೀನು ಪಡೆದು ಹೊರಬಂದ ಆರೋಪಿಗಳು, ಮತ್ತೆ ನ್ಯಾಯಾಲಯಗಳಿಗೆ ಹಾಜರಾಗದೆ ತಲೆ ಮರೆಸಿಕೊಳ್ಳುತ್ತಿದ್ದರು. ಆರೋಪಿಗಳಿಗೆ ಶ್ಯೂರಿಟಿ ನೀಡಿದವರನ್ನು ಪತ್ತೆ ಮಾಡಲು ಪ್ರಯತ್ನಿಸಿದರೆ ಅವರು ಸಿಗುತ್ತಿರಲಿಲ್ಲ. ಇದರಿಂದ ಪ್ರಕರಣಗಳು ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೆ ಉಳಿಯುತ್ತಿದ್ದವು.