
ಬೆಂಗಳೂರು: ತೆರಿಗೆ ವಂಚನೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ್ ಗೆ ಆಧಾರ್ ನಂಬರ್ ಜೋಡಣೆ ಕಡ್ಡಾಯಗೊಳಿಸಿದ ಬೆನ್ನಲ್ಲೇ ನಕಲಿ ಮತದಾನ ತಡೆಗೆ ವೋಟರ್ ಐಡಿಗೂ ಆಧಾರ್ ನಂಬರ್ ಜೋಡಣೆಗೆ ಸರ್ಕಾರ ಮುಂದಾಗಲಿ ಎಂಬ ವಾದ ಕೂಡ ಕೇಳಿಬರುತ್ತಿದೆ.
ಈ ಬಗ್ಗೆ ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು, ಮತದಾನದ ವೇಳೆ ನಕಲಿ ಮತದಾನದಂತಹ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ ಸರ್ಕಾರ ನಕಲಿ ಮತದಾನ ತಡೆಗೆ ಮತದಾರ ಗುರುತಿನ ಚೀಟಿಯೊಂದಿಗೆ ಆಧಾರ್ ನಂಬರ್ ಅನ್ನೂ ಕೂಡ ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.
ಇನ್ನು ಮತದಾರ ಗುರುತಿನ ಚೀಟಿಯೊಂದಿಗೆ ಆಧಾರ್ ಜೋಡಣೆ ಮಾಡುವುದರಿಂದ ನಕಲಿ ಮತದಾನವನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆಗೆ, ಮತದಾನ ಮಾಡುವಾಗ ಮತದಾರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಕೂಡ ಕಡ್ಡಾಯವಾಗಿ ಒಯ್ಯಬೇಕು. ಮತದಾನಕ್ಕೂ ಮುನ್ನ ಬೆರಳ ತುದಿಗೆ ಶಾಹಿ ಹಾಕುವ ಬದಲಿಗೆ ಆಧಾರ್ ನಂಬರ್ ನಮೂದಿಸಿಕೊಳ್ಳಬೇಕು. ಅಥವಾ ಆಧಾರ್ ಕೋಡ್ ಸ್ಕ್ಯಾನ್ ಮಾಡಿಚಟ್ಟುಕೊಳ್ಳಬೇಕು. ಅಂತೆಯೇ ಒಂದು ಬಾರಿ ಸ್ಕ್ಯಾನ್ ಮಾಡಿದ ಆಧಾರ್ ನಂಬರ್ ಎರಡನೇ ಬಾರಿ ಸ್ಕಾನ್ ಮಾಡಲು ಮುಂದಾದಾಗ ಈ ಬಗ್ಗೆ ಎಚ್ಚರಿಕೆ ನೀಡುವಂತಹ ಯಂತ್ರಗಳನ್ನು ಆವಿಷ್ಕರಿಸಬೇಕು. ಆ ಮೂಲಕ ಎರಡೆರಡು ಬಾರಿ ಮತದಾನ ಮಾಡುವುದು ಅಥವಾ ನಕಲಿ ಮತದಾನ ತಡೆಯಬಹುದು ಎಂದು ಕೆಲವರು ವಾದಿಸಿದ್ದಾರೆ. ಅಂತೆಯೇ ಚುನಾವಣಾ ಆಯೋಗ ಈ ಬಗ್ಗೆ ಚಿಂತಿಸಲಿ ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆ ಈ ಚರ್ಚೆ ಇದೀಗ ಕೇವಲ ರಾಜಕೀಯ ವಲಯದಲ್ಲಿ ಮಾತ್ರವಲ್ಲ, ಪತ್ರಕರ್ತರ ವಲಯದಲ್ಲೂ ಭಾರಿ ಚರ್ಚೆಗೀಡಾಗುತ್ತಿದೆ.
Advertisement