

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಹಿತ ಬಡವರಿಗೆ ನಿವೇಶನ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸುಮಾರು 1 ಲಕ್ಷ ವಸತಿ ನಿರ್ಮಿಸುವ ನಿರ್ಧಾರ ಕೈಗೊಂಡಿದೆ.
ಈ ಹಿಂದೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ 1 ಲಕ್ಷ ವಸತಿ ರಹಿತ ಬಡವರಿಗೆ ಸೂರು ಕಲ್ಪಿಸುವ ಆಸ್ವಾಸನೆ ನೀಡಿದ್ದರು. ಅದರಂತೆ ಇದೀಗ ಆ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಕಾರ್ಯರೂಪಕ್ಕೆ ತರಲು ನಿರ್ಧರಿಸಿದ್ದು. ಸುಮಾರು 1 ಲಕ್ಷ ಬೆಂಗಳೂರಿನ ನಿವೇಶನ ರಹಿತ ಬಡವರಿಗೆ ಸೂರು ಕಲ್ಪಿಸಲು ಮುಂದಾಗಿದೆ. ಈ ಬಗ್ಗೆ ಯೋಜನೆ ರೂಪುರೇಷೆ ಕುರಿತು ರ್ಚಚಿಸಲು ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ವಸತಿ, ಹಣಕಾಸು, ಕಂದಾಯ ಇಲಾಖೆ ಮತ್ತು ಗೃಹ ಮಂಡಳಿ, ಬಿಬಿಎಂಪಿ ಅಧಿಕಾರಿಗಳ ಸಭೆ ಕರೆದಿದ್ದ ಮುಖ್ಯಮಂತ್ರಿ, ಯೋಜನೆಯನ್ನು ಆದಷ್ಟು ಬೇಗ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದರು. ಬಹುಮಹಡಿಗಳ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಕೂಡಲೇ ವಸತಿ ಇಲಾಖೆಗೆ ಹಸ್ತಾಂತರ ಮಾಡುವಂತೆಯೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.
ಇನ್ನು ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಗೆ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದ್ದು, 1,130 ಎಕರೆ ಸರ್ಕಾರಿ ಜಮೀನಿನ ಪಟ್ಟಿಯನ್ನು ಮಂಜೂರಾತಿಗಾಗಿ ಕಂದಾಯ ಇಲಾಖೆಗೆ ಸಲ್ಲಿಸಲಾಗಿದೆ ಎಂದು ವಸತಿ ಇಲಾಖೆ ಅಧಿಕಾರಿಗಳು ತಿಳಿಸಿದರು. ಅಂತೆಯೇ ಗುರುತಿಸಿರುವ ಜಮೀನಿನಲ್ಲಿ ಮನೆಗಳನ್ನು ನಿರ್ವಿುಸಬಹುದೆ? ಅದು ವಾಸ ಯೋಗ್ಯ ಭೂಮಿಯೇ ಎಂಬುದರ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹತ್ತು ದಿನದಲ್ಲಿ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮನೆಗಳನ್ನು ಅತ್ಯಂತ ಪಾರದರ್ಶಕವಾಗಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಲು ಅವಕಾಶ ನೀಡಲಾಗುವುದು. ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಮಹತ್ವದ ಸಭೆಯಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ಎಂ. ಕೃಷ್ಣಪ್ಪ, ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮತ್ತಿತರರು ಉಪಸ್ಥಿತರಿದ್ದರು.
ನಗರದಲ್ಲಿ ಈ ಹಿಂದೆ ಅಕ್ರಮ ಒತ್ತುವರಿ ತೆರವುಗೊಳಿಸಿದ 1,130 ಎಕರೆ ಪ್ರದೇಶದಲ್ಲಿಯೇ ಈಗ ಬಡವರ ಬಹುಮಹಡಿ ಮನೆಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದ್ದು, ಈ ಪೈಕಿ ಶೇ.30ರಷ್ಟು ಮನೆಗಳು ಪರಿಶಿಷ್ಠ ಜಾತಿ ಮತ್ತು ಶೇ.10ರಷ್ಟು ಮನೆಗಳು ಪರಿಶಿಷ್ಚ ಪಂಗಡಕ್ಕೆ ಸೇರಿದ ವಸತಿ ರಹಿತ ಬಡವರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.