ಸರ್ಕಾರಿ ವೈದ್ಯರು ಖಾಸಗಿ ಔಷಧ ಅಂಗಡಿಗೆ ಚೀಟಿ ಬರೆದರೆ ಕೆಲಸಕ್ಕೇ ಕುತ್ತು!

ಸರ್ಕಾರಿ ವೈದ್ಯರು ಖಾಸಗಿ ಔಷಧ ಅಂಗಡಿಗೆ ಚೀಟಿ ಬರೆದರೆ ಕೆಲಸದಿಂದ ವಜಾ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಖಾಸಗಿ ಔಷಧಾಲಯಗಳಿಗೆ ಚೀಟಿ ಬರೆಯುವ ಮೂಲಕ ಸರ್ಕಾರಿ ವೈದ್ಯರು ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪಗಳ ನಡುವೆಯೇ ಅಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಆರೋಗ್ಯ ಇಲಾಖೆ, ಸರ್ಕಾರಿ  ವೈದ್ಯರು ಖಾಸಗಿ ಔಷಧ ಅಂಗಡಿಗೆ ಚೀಟಿ ಬರೆದರೆ ಕೆಲಸದಿಂದ ವಜಾ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಇಲಾಖೆ ವತಿಯಿಂದ ಎಲ್ಲ ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ವೈದ್ಯರಿಗೆ ಅಧಿಸೂಚನೆ ನೀಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರು ಕೆಲಸಕ್ಕೆ  ಸೇರುವಾಗಲೇ ಖಾಸಗಿ ಆಸ್ಪತ್ರೆ ಅಥವಾ ಖಾಸಗಿ ಔಷಧಾಲಯಗಳಿಗೆ ತೆರಳುವಂತೆ ರೋಗಿಗಳಿಗೆ ಸೂಚಿಸುವುದಿಲ್ಲ ಎಂದು ಪ್ರಕಟಣಾ ಪತ್ರಕ್ಕೆ ಸಹಿ ಹಾಕಿರುತ್ತಾರೆ. ಹೀಗಾಗಿ ಖಾಸಗಿ ಔಷಧಾಲಯಗಳಿಗೆ ಚೀಟಿ ಬರೆಯುವುದು  ಘೋಷಣಾ ಪ್ರಮಾಣ ಪತ್ರದ ಉಲ್ಲಂಘನೆಯಾಗಿದ್ದು, ಇಂತಹ ವೈದ್ಯರ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.

ಒಂದು ವೇಳೆ ಸರ್ಕಾರಿ ವೈದ್ಯರು ನಿಯಮ ಉಲ್ಲಂಘನೆ ಮಾಡಿದ್ದೇ ಆದರೆ ಅಂತಹ ವೈದ್ಯರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಶಾಲಿನಿ ರಜನೀಶ್ ಹೇಳಿದ್ದಾರೆ.

ಸರ್ಕಾರಿ ಔಷಧಾಲಯಗಳಲ್ಲಿ ಔಷಧಿ ದೊರೆಯದಿದ್ದರೆ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಆನ್ ಲೈನ್ ನಲ್ಲಿ ಔಷಧಿ ತರಿಸಿಕೊಳ್ಳಬಹುದು. ಅಥವಾ ಜನರಿಕ್ ಔಷಧಾಲಯಗಳಿಗೆ ಚೀಟಿ ಬರೆಯಬಹುದು. ಒಂದು ವೇಳೆ  ಸಂಬಂಧ ಪಟ್ಟ ಔಷಧ ಸಂಸ್ಥೆಗಳಿಂದಲೂ ನಿಗದಿತ ಔಷಧಿ ದೊರೆಯದಿದ್ದರೆ, ಆರೋಗ್ಯ ರಕ್ಷಾ ಸಮಿತಿ ಮೂಲಕ ಅನುದಾನ ಪಡೆದು ಸ್ಥಳೀಯವಾಗಿ ಔಷಧಿ ತರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡ್ ಕೆಎಸ್ ಮಂಜುನಾಥ್ ಅವರು, ಕೆಲ ಪ್ರಮುಖ ಪ್ರಕರಣಗಳಲ್ಲಿ ಮಾತ್ರ ಖಾಸಗಿ ಔಷಧಾಲಯಗಳಿಂಜ ಔಷಧಿ ತರಿಸಿಕೊಳ್ಳಲಾಗುತ್ತದೆ.  ಇಲ್ಲವಾದಲ್ಲಿ ಆಸ್ಪತ್ರೆಗೆ ಅಗತ್ಯ ವಿರುವ ಎಲ್ಲ ಔಷಧಿಗಳು ಸರ್ಕಾರಿ ಔಷಧಾಲಯಗಳಲ್ಲೇ ದೊರೆಯುತ್ತದೆ. ವೈದ್ಯರು ಸರ್ಕಾರಿ ಔಷಧಾಲಯಗಳಲ್ಲಿ ದೊರೆಯುವ ಔಷಧಿಗಳನ್ನೇ ರೋಗಿಗಳಿಗೆ ಸೂಚಿಸಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com