

ಬೆಂಗಳೂರು: 2008 ರಿಂದ ಇಲ್ಲಿಯವರೆಗೆ ಕರ್ನಾಟಕದಲ್ಲಿ ಸುಮಾರು 60 ಮಂದಿ ನೈರ್ಮಲ್ಯ ಕಾರ್ಮಿಕರು ವಿವಿಧ ದುರಂತಗಳಲ್ಲಿ ಮೃತ ಪಟ್ಟಿದ್ದಾರೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ತಿಳಿಸಿದೆ.
2008 ರಲ್ಲಿ 7 ರಿಂದ 2015 ರಲ್ಲಿ 11ಕ್ಕೇರಿದೆ, 2016 ರಲ್ಲಿ ಒಟ್ಟು 10 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಒಳ ಚರಂಡಿ ಹಾಗೂ ಮ್ಯಾನ್ ಹೋಲ್ ಗಳನ್ನು ಸ್ವಚ್ಚಗೊಳಿಸುವ ಸಾಧನಗಳ ಕೊರತೆ ಹಾಗೂ ಅವುಗಳ ವೆಚ್ಚ ದುಬಾರಿಯಾಗಿರುವುದರಿಂದ ರಾಜ್ಯದಲ್ಲಿ ಇನ್ನೂ ಮನುಷ್ಯರನ್ನೇ ಬಳಸಿಕೊಂಡು ಕೆಲಸ ಮಾಡಲಾಗುತ್ತಿದೆ ಎಂದು ಚಳುವಳಿಗಾರರು ಹೇಳಿದ್ದಾರೆ.
ಈ ಕಾರ್ಮಿಕರಲ್ಲಿ ಶೇ. 95 ರಷ್ಟು ಮಂದಿ ದಲಿತ ಸಮುದಾಯದವರಾಗಿದ್ದಾರೆ. ವಿಧಾನಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ಈ ಪದ್ಧತಿಯನ್ನು ಅಂತ್ಯಗೊಳಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು, ಆದರೆ ಇದುವರೆಗೂ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ನಾಗರಿಕ ಹಕ್ಕುಗಳಿಗಾಗಿನ ಜನತಾ ಒಕ್ಕೂಟ (ಪಿಯುಸಿಎಲ್) ದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಆರೋಪಿಸಿದ್ದಾರೆ.
ಸರ್ಕಾರ ನಡೆಸಿದ ಸಮೀಕ್ಷೆ ಪ್ರಕಾರ 300 ಮಂದಿ ಮಲ ಹೊರುವವರು ಇದ್ದಾರೆ. ಸಫಾಯಿ ಕರ್ಮಚಾರಿ ಆಯೋಗದ ಪ್ರಕಾರ ಅವರ ಸಂಖ್ಯೆ 4 ಸಾವಿರ ದಾಟುತ್ತದೆ. ರಾಜಧಾನಿಯಲ್ಲೇ 500ಕ್ಕೂ ಅಧಿಕ ಮಂದಿ ಇದ್ದಾರೆ. ಈ ಅನಿಷ್ಠ ಪದ್ಧತಿಯಲ್ಲಿ ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಮೊದಲ 3 ಸ್ಥಾನದಲ್ಲಿದ್ದು, ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಕೇವಲ 776 ಮಂದಿ ನೈರ್ಮಲ್ಯ ಕಾರ್ಮಿಕರು ಇದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಾಚಾರಿ ಆಯೋಗದ ಅಧ್ಯಕ್ಷ ಎಂ.ಆರ್ ವೆಂಕಟೇಶ್ ತಿಳಿಸಿದ್ದಾರೆ.320 ಮಂದಿ ನಗರದಲ್ಲಿ ಹಾಗೂ 474 ಮಂದಿ ಕಾರ್ಮಿಕರು ಗ್ರಾಮಾಂತರ ಪ್ರದೇಶದಲ್ಲಿ ಇದ್ದಾರೆ ಎಂದು ಅವತು ತಿಳಿಸಿದ್ದಾರೆ.
ಅರ್ಹ ಕಾರ್ಮಿಕರಿಗೆ ಸರ್ಕಾರದ ಸವಲತ್ತುಗಳು ದೊರೆಯುತ್ತಿಲ್ಲ. 2012 ರಿಂದ2015ರ ವರೆಗೆ ಕೇವಲ214 ಮಂದಿ ನೈರ್ಮಲ್ಯ ಕಾರ್ಮಿಕರು ಸರ್ಕಾರದಿಂದ ಒಂದು ಬಾರಿ 40 ಸಾವಿರ ರು. ಹಣ ಪಡೆದಿದ್ದಾರೆ.
ಒಳಚರಂಡಿ ಸ್ವಚ್ಛಗೊಳಿಸಲು ಕಾರ್ಮಿಕರ ಬಳಕೆ ಮಾಡುವುದಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಜಲಮಂಡಳಿ 2012ರ ಆರಂಭದಲ್ಲಿ ಮೌಖಿಕವಾಗಿ ತಿಳಿಸಿತ್ತು. ಆದರೆ ಯಂತ್ರೋಪಕರಣಗಳ ಕೊರತೆ, ಬ್ಲಾಕ್ ಆಗಿರುವ ಚರಂಡಿ ಸ್ವಚ್ಚಗೊಳಿಸುವ ವೇಳೆ ಸಾಧನಗಳು ಕೈಕೊಡುತ್ತವೆ, ಇಂತಹ ಪರಿಸ್ಥಿತಿಗಳಿಂದಾಗಿ ಕಾರ್ಮಿಕರನ್ನು ಬಳಸಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತದೆ ಎಂದು ಬಿಡಬ್ಲ್ಯೂ ಎಸ್ ಎಸ್ ಬಿ ಅಧಿಕಾರಿಗಳು ತಿಳಿಸಿದ್ದಾರೆ.
1993 ರಿಂದ ಇದುವರೆಗೆ ಈ ದುರಂತಗಳಲ್ಲಿ ಸಾವನ್ನಪ್ಪಿರುವ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರ ತಲಾ 10 ಲಕ್ಷ ರು ಪರಿಹಾರ ನೀಡಬೇಕು. ಇದೊಂದು ಜಾಮೀನು ರಹಿತ ಅಪರಾಧವಾಗಿರುವುದರಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚೇಂಜ್ ಇಂಡಿಯಾ ನಿರ್ದೇಶಕ ಎ ನಾರಾಯಣ ಆಗ್ರಹಿಸಿದ್ದಾರೆ.