

ಧಾರವಾಡ: ಬಸ್ ಗಾಗಿ ಕಾಯುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿದ ದುಷ್ಕರ್ಮಿಗಳು ಚಲಿಸುತ್ತಿದ್ದ ವ್ಯಾನ್ ನಲ್ಲಿ ಆಕೆಯನ್ನು ದರೋಡೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ವಿದ್ಯಾಗಿರಿಯಲ್ಲಿ ಟ್ಯೂಶನ್ ಮುಗಿಸಿ ವಾಪಸ್ ಮನೆಗೆ ತೆರಳಲು ಬಸ್ ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ,
ಬಸ್ ಗಾಗಿ ಸಂತ್ರಸ್ತೆ ತನ್ನ ಸಹಪಾಠಿ ಶಶಿ( ಹೆಸರು ಬದಲಾಯಿಸಲಾಗಿದೆ) ಜೊತೆ ಕಾಯುತ್ತಿದ್ದಳು. ಈ ವೇಳೆ ಶಶಿ ನೀರಿನ ಬಾಟಲ್ ತರಲು ತೆರಳಿದಾಗ, ಮಾರುತಿ ವ್ಯಾನ್ ನಲ್ಲಿ ಬಂದವರು ಆಕೆಯನ್ನು ಅಪಹರಿಸಿ ಪರಾರಿಯಾಗಿದ್ದಾರೆ. ಆಕೆ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಳಾದರೂ ಸಾಧ್ಯವಾಗಲಿಲ್ಲ. ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಅಪಹರಣಕಾರರು ಆಕೆಯನ್ನು ಕಾರಿನಲ್ಲಿ ಎಳೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ಬಳಿ ಹಣಕ್ಕೆ ಒತ್ತಾಯಿಸಿದ ದುಷ್ಕರ್ಮಿಗಳು ವಿದ್ಯಾರ್ಥಿನಿ ಬಳಿಯಿದ್ದ 1,800 ರು ಹಣ ಮತ್ತು ಚಿನ್ನದ ಒಡವೆಗಳನ್ನು ದೋಚಿದ್ದಾರೆ. ನಂತರ ದೊಡ್ಡ ವಾಡ್ ಶಾಲೆಯ ಬಳಿ ಆಕೆಯನ್ನು ಕಾರಿನಿಂದ ಹೊರ ತಳ್ಳಿ ಪರಾರಿಯಾಗಿದ್ದಾರೆ.