ಮಿತಿ ಮೀರಿದ ಮಾಲಿನ್ಯ, ದೊಡ್ಡಕಲ್ಲಸಂದ್ರ ಕೆರೆಯಲ್ಲಿ ನೂರಾರು ಮೀನುಗಳ ಸಾವು

ಕೋಣನಕುಂಟೆ ಸಮೀಪದ ದೊಡ್ಡಕಲ್ಲಸಂದ್ರ ಕೆರೆಗೆ ಅಪಾಯಕಾರಿ ತ್ಯಾಜ್ಯ ಸೇರಿರುವ ಪರಿಣಾಮ ನೂರಾರು ಮೀನುಗಳು ಸತ್ತಿದ್ದು,....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ಕೋಣನಕುಂಟೆ ಸಮೀಪದ ದೊಡ್ಡಕಲ್ಲಸಂದ್ರ ಕೆರೆಗೆ ಅಪಾಯಕಾರಿ ತ್ಯಾಜ್ಯ ಸೇರಿರುವ ಪರಿಣಾಮ ನೂರಾರು ಮೀನುಗಳು ಸತ್ತಿದ್ದು, ಇಡೀ ಕೆರೆ ದುರ್ವಾಸನೆ ಬೀರುತ್ತಿದೆ. ಇದರಿಂದಾಗಿ ಸ್ಥಳೀಯರು ನರಕಯಾತನೆ ಅನುಭವಿಸುವ ಸ್ಥಿತಿ ಎದುರಾಗಿದೆ.
ಈ ಹಿಂದೆ ವಿಸ್ತಾರವಾಗಿದ್ದ ಈ ಕೆರೆ ಈಗ ಒತ್ತುವರಿಯಾಗಿ 2 ಎಕರೆಯಷ್ಟು ಉಳಿದಿದೆ. ಕೆರೆ ಸಂರಕ್ಷಣೆ ಬಗ್ಗೆ ಮಾಹಿತಿಯೇ ಇಲ್ಲದ ಬಿಬಿಎಂಪಿ ಯಾಗಲೀ ಅಥವಾ ಇತರ ಇಲಾಖೆಗಳಾಗಲೀ ಮುಂದಾಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲ ಕೈಗಾರಿಕೆಗಳಿದ್ದು, ಅವುಗಳಿಂದ ನೇರವಾಗಿ ಕೆರೆಗೆ ತ್ಯಾಜ್ಯ ನೀರನ್ನು ಹರಿಬಿಡಲಾಗುತ್ತಿದೆ. ಇದರ ಪರಿಣಾಮವಾಗಿ ಮೀನುಗಳು ಸತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.
ನೀರು ಸಂಪೂರ್ಣವಾಗಿ ಪಾಚಿಗಟ್ಟಿ ದುರ್ಗಂಧ ಬೀರುತ್ತಿದೆ. ಕಳೆದ ಹಲವು ದಿನಗಳಿಂದ ಮೀನುಗಳು ಸಾಯುತ್ತಿವೆ. ಹೀಗಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಸ್ಥಳೀಯ ನಿವಾಸಿಗಳು ಕಾರ್ಪೋರೇಟರ್ ಸಹಕಾರದೊಂದಿಗೆ ಕೆರೆಯ ಸ್ವಚ್ಛತೆಗೆ ಮುಂದಾಗಿದ್ದು, ಕೆರೆಯ ಬಳಿಯಲ್ಲಿ ಸಾಕಷ್ಟು ಮನೆಗಳಿರುವುದರಿಂದ ವಾಸಿಸುವುದು ಕಷ್ಟವಾಗಿದೆ ಎಂದು ಸ್ಥಳೀಯ ನಿವಾಸಿ ರವೀಂದ್ರನ್ ಅವರು ತಿಳಿಸಿದ್ದಾರೆ. 
ಬಿಬಿಎಂಪಿ ಅಧಿಕಾರಿಗಳು ಹಲವು ವರ್ಷಗಳಿಂದ ಈ ಕೆರೆ ಬಗ್ಗೆ ನಿರ್ಲಕ್ಷ ವಹಿಸಿದ್ದಾರೆ. ಆದರೆ ದಿನದಿಂದ ದಿನಕ್ಕೆ ಕೆರೆಯ ಮಾಲಿನ್ಯ ಮಿತಿ ಮೀರುತ್ತಿರುವುದರಿಂದ ನಾವೇ ಕೆರೆ ಸ್ವಚ್ಛಗೊಳಿಸಲು ನಿರ್ಧರಿಸಿದೆವು ಎಂದು ರವೀಂದ್ರನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com