ಬೆಂಗಳೂರು: ಪ್ರತಿ ಪಕ್ಷ ಬಿಜೆಪಿ ಹಾಗೂ ಕೆಲ ಹಿಂದೂಪರ ಸಂಘಟನೆಗಳ ತೀವ್ರ ವಿರೋಧದ ನಡುವೆಯೇ ರಾಜ್ಯ ಸರ್ಕಾರ ರಾಜ್ಯಾದ್ಯಂತ ಟಿಪ್ಪು ಜಯಂತಿಯನ್ನು ಆಚರಿಸಿದ್ದು, ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ.
ಟಿಪ್ಪು ಜಯಂತಿ ಆಚರಣೆ ವೇಳೆ ಹಿಂಸಾಚಾರ ನಡೆಯದಂತೆ ತಡೆಯಲು ರಾಜ್ಯ ಸರ್ಕಾರ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದು, ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ.
ಇಂದು ವಿಧಾನಸೌಧ ಸೇರಿದಂತೆ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ.
ಮಡಿಕೇರಿಯಲ್ಲಿ ನಿಷೇಧಾಜ್ಞೆಯ ಹೊರತಾಗಿಯೂ ಭಾರೀ ಪ್ರತಿಭಟನೆಗಳನ್ನು ನಡೆಸಲಾಗುತ್ತಿದ್ದು, ಪ್ರತಿಭಟನಾ ನಿರತ ವಿರಾಜಪೇಟೆ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿದೆ.
ಮಡಿಕೇರಿಯಲ್ಲಿ ಟಿಪ್ಪು ಜಯಂತಿ ವಿರೋಧಿಸಿದ ಸಂಘ ಪರಿವಾರದ ಕಾರ್ಯಕರ್ತರು ಕಳೆದ ಬಾರಿ ಟಿಪ್ಪು ಜಯಂತಿ ವೇಳೆ ಘರ್ಷಣೆಯಲ್ಲಿ ಸಾವನ್ನಪ್ಪಿದ ಕುಟ್ಟಪ್ಪ ಅವರ ಹುತಾತ್ಮ ದಿನಾಚರಣೆಯನ್ನು ಆಚರಿಸಿದರು. ಇನ್ನು ಜಿಲ್ಲೆಯ ಕೆಲವು ಕಡೆ ಸಂಪೂರ್ಣ ಬಂದ್ ವಾತಾವರಣ ಕಂಡು ಬಂದಿದೆ.
ಇನ್ನು ಮಂಗಳೂರಿನಲ್ಲೂ ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದು, ಹಲವರನ್ನು ವಶಕ್ಕೆ ಪಡೆಯಾಲಾಗಿದೆ.
ಮಂಗಳೂರಿನಲ್ಲಿ ಕಾರ್ಯಕ್ರಮಕ್ಕೆ ಏಕಾಂಗಿಯಾಗಿ ಬಂದಿದ್ದ ಬಿಜೆಪಿ ನಾಯಕ ಫ್ರಾಂಕ್ಲಿನ್ ಮೊಂತೆರೋ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.