ಇದೇ ವೇಳೆ ಪೂರ್ವ ನಿಗದಿತ ಕಾರ್ಯಕ್ರಮದಂತೆ ಯಾವುದೇ ಸಚಿವರು ಮತ್ತು ಗಣ್ಯರಿಗೆ ಸಭೆಗೆ ಆಹ್ವಾನವಿರಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ನೌಕರರ ಮನವಿ ಸ್ವೀಕರಿಸಲು ಆಗಮಿಸಿದ್ದ ಸಚಿವ ಕೆ.ಜೆ.ಜಾರ್ಜ್, ಸರ್ಕಾರಿ ನೌಕರರ ಆಕ್ರೋಶಕ್ಕೆ ತುತ್ತಾದರು. ಸಭೆಗೆ ಆಗಮಿಸುತ್ತಿದ್ದಂತೆ ಬೇರೆ ಕಾರ್ಯಕ್ರಮದ ನೆಪ ಹೇಳಿ ಮನವಿ ಕೊಡಿ ಎಂದು ಕೇಳಿದ ಜಾರ್ಜ್ ವಿರುದ್ಧ ಕೆಲ ನೌಕರರು ಆಕ್ರೋಶ ವ್ಯಕ್ತಪಡಿಸಿದರು. ತರಾತುರಿ ಮಾಡಬೇಡಿ, ಭಾಷಣ ಕೇಳಿ ಎಂದು ಸಭೆಯಲ್ಲಿದ್ದವರು ಪಟ್ಟು ಹಿಡಿದರು. ಅಹಿಂಸಾ ಅಧ್ಯಕ್ಷ ಎಂ. ನಾಗರಾಜ್ ಮೊನಚಿನ ಭಾಷಣಕ್ಕೆ ಸಭೆಯಲ್ಲಿದ್ದವರಿಂದ ಬರುತ್ತಿದ್ದ ಉದ್ಘೋಷ ಪ್ರತಿಕ್ರಿಯೆಗೆ ಸಚಿವರು ಇನ್ನೊಂದಿಷ್ಟು ಪೆಚ್ಚಾದರು. ಕೊನೆಗೆ ಮನವಿ ಸ್ವೀಕರಿಸಿ ಮಾತನಾಡಿದ ಅವರು, ‘ನಾವು ಆರೂವರೆ ಕೋಟಿ ಜನರ ಪರವಾಗಿ ಸರ್ಕಾರ ನಡೆಸುತ್ತಿದ್ದೇವೆ’ ಎಂದಾಗ, ‘ಇಲ್ಲ’ ‘ಇಲ್ಲ’ ಎಂದು ಸಭೆಯಲ್ಲಿದ್ದವರು ಕೈ ಎತ್ತಿ ಕೂಗಿದಾಗ ಪುನಃ ಮುಜುಗರಕ್ಕೊಳಗಾದರು.