ಇನ್ನು ಬಿಬಿಸಿ ವರದಿಯಲ್ಲಿರುವಂತೆ "ತಾಜಾ ಆಗಿರುವ, ಬಿಸಿ, ಬಿಸಿ ಆಹಾರವನ್ನು ಜನರು ಅತ್ಯಂತ ಕಡಿಮೆ ದರದಲ್ಲಿ ಕೊಳ್ಳುತ್ತಿದ್ದು, ಸರ್ಕಾರದ ಈ ಯೋಜನೆ ಹೆಚ್ಚು ಜನಪ್ರಿಯವಾಗಿದೆ. ದಿನಗೂಲಿ ಕಾರ್ಮಿಕರು, ಚಾಲಕರು, ಭದ್ರತಾ ಸಿಬ್ಬಂದಿ, ಭಿಕ್ಷುಕರು ಸೇರಿ ಬಡವರು ಆಹಾರ ಕೊಳ್ಳುತ್ತಿದ್ದು, ಇಂಥವರ ಹಸಿವು ನೀಗಿಸುವಲ್ಲಿ, ಸರ್ಕಾರ ತೆಗೆದುಕೊಂಡಿರುವ ಕ್ರಮ ಶ್ಲಾಘನೀಯ ಎಂದು ಬಿಬಿಸಿ ವರದಿ ಮಾಡಿದೆ ಎಂದು ಹೇಳಲಾಗಿದೆ. ಕೇವಲ ಐದು ರೂ.ಗೆ ತಿಂಡಿ ಸಿಗಲಿದ್ದು, ಈ ಮುಂಚೆ 30 ರೂ. ಖಾಲಿ ಮಾಡುತ್ತಿದ್ದವರು ದಿನಕ್ಕೆ 25 ರೂ. ಉಳಿಸುವಂತಾಗಿದೆ. ಮೂರು ಹೊತ್ತಿನ ಊಟಕ್ಕೆ ಸುಮಾರು 140 ರೂ. ಖಾಲಿ ಮಾಡುತ್ತಿದ್ದವರು ಇದೀಗ ಕೇವಲ 40 ರೂ. ಖಾಲಿ ಮಾಡುತ್ತಿದ್ದು, ದಿನಕ್ಕೆ 100 ರೂ.ನಷ್ಟು ಉಳಿತಾಯ ಮಾಡುತ್ತಿದ್ದಾರೆ. ಇದರಿಂದ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂದು ಬಿಬಿಸಿ ವರದಿಯಲ್ಲಿ ಅಭಿಪ್ರಾಯ ಪಟ್ಟಿದೆ.