ತುಮಕೂರು: ಜೆಡಿಎಸ್ ಪಕ್ಷದ ಮನೆಮನೆಗೆ ಕುಮಾರಣ್ಣ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಎಚ್.ಡಿ ಕುಮಾರ ಸ್ವಾಮಿ ಅವರ ಅನುಪಸ್ಥಿತಿ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಬುಧವಾರ ಸಿದ್ಧಗಂಗಾ ಮಠದಲ್ಲಿ ಚಾಲನೆ ನೀಡಲಾಯಿತು. ಎಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಿಸಲೆಂದು ಮಠದಲ್ಲಿ ಆಯೋಜಿಸಿದ್ದ ಪರ್ಜನ್ಯ, ಮೃತ್ಯುಂಜಯ, ಗಣ ಹೋಮ ಸೇರಿ ವಿವಿಧ ಬಗೆಯ ಹೋಮ, ಹವನಕ್ಕೆ ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡ ಪೂಜೆ ಸಲ್ಲಿಸಿದರು.
ನಂತರ ಮಠಾಧೀಶ ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಜೆಡಿಎಸ್ ಪಕ್ಷ ತಂದಿರುವ ಪ್ರಚಾರ ಸಾಹಿತ್ಯವನ್ನು ಸ್ವಾಮೀಜಿ
ಬಿಡುಗಡೆಗೊಳಿಸಿದರು.
ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಧಾರ್ಮಿಕ ಗುರುಗಳ ಆಶೀರ್ವಾದದ ಅಗತ್ಯವಿದೆ. ತುಂಬಾ ಹಿಂದೆಯೇ ನಾನು ಸ್ವಾಮೀಜಿಗಳ ಶಕ್ತಿ ಬಗ್ಗೆ ತಿಳಿದಿದ್ದೆ. 1968 ರಲ್ಲಿ ವೀರೇಂದ್ರ ಪಾಟೀಲ್ ಅವರನ್ನು ಮಠಕ್ಕೆ ಕರೆತಂದಿದ್ದೆ, ಅದಾದ ನಂತರ ಅವರು ಸಿಎಂ ಆದರು ಎಂದು ದೇವೇಗೌಡ ನೆನಪಿಸಿಕೊಂಡರು.
ಶ್ರೀಗಳು ಆಶೀರ್ವಾದ ಮಾಡಿರುವುದು ನಮಗೆ ಶಕ್ತಿ ತಂದಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ’ಮನೆಮನೆಗೆ ಕುಮಾರಣ್ಣ’ ಕಾರ್ಯಕ್ರಮ ನಡೆಯಲಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಶಾಸಕರು, ಸೋತವರು, ಟಿಕೆಟ್ ಆಕಾಂಕ್ಷಿಗಳು, ಮನೆಮನೆಗೆ ತೆರಳಿ ಮತದಾರರಿಗೆ ಮನದಟ್ಟು ಮಾಡಿಕೊಡಲಿದ್ದಾರೆ ಎಂದರು.
ಜೆಡಿಎಸ್ ಅಧಿಕಾರ ಹಿಡಿಯುವುದು ಭ್ರಮೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ತಿರುಗೇಟು ನೀಡಿದ ಅವರು, ‘ಸಿದ್ದರಾಮಯ್ಯ ಅಧಿಕಾರ, ಹಣದ ಅಹಂಕಾರದಿಂದ ಇಂಥ ಮಾತುಗಳನ್ನು ಆಡುತ್ತಿದ್ದಾರೆ. ನಾನು ಅಹಂಕಾರದಿಂದ ಮಾತನಾಡುವುದಿಲ್ಲ. ಅವರ ಮಾತುಗಳಿಗೆ ಅಸಮಾಧಾನ, ಅಸೂಯೆ ಪಡುವುದಿಲ್ಲ’ ಎಂದರು.