ನಕ್ಸಲರು ಗೌರಿ ಲಂಕೇಶ್'ಗೆ ದ್ವೇಷಪೂರಿತ ಪತ್ರಗಳನ್ನು ಕಳುಹಿಸುತ್ತಿದ್ದರು: ಸಹೋದರ ಇಂದ್ರಜಿತ್ ಲಂಕೇಶ್

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ನಕ್ಸಲರು ದ್ವೇಷಪೂರಿತ ಪತ್ರಗಳನ್ನು ಬರೆದು ಕಳುಹಿಸುತ್ತಿದ್ದರು ಎಂದು ಸಹೋದರ ಇಂದ್ರಜಿತ್ ಲಂಕೇಶ್ ಅವರು ಹೇಳಿಕೊಂಡಿದ್ದಾರೆ...
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್
Updated on: 
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ನಕ್ಸಲರು ದ್ವೇಷಪೂರಿತ ಪತ್ರಗಳನ್ನು ಬರೆದು ಕಳುಹಿಸುತ್ತಿದ್ದರು ಎಂದು ಸಹೋದರ ಇಂದ್ರಜಿತ್ ಲಂಕೇಶ್ ಅವರು ಹೇಳಿಕೊಂಡಿದ್ದಾರೆ. 
ಸಹೋದರಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಇಂದ್ರಜಿತ್ ಲಂಕೇಶ್ ಅವರು, ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಗೌರಿ ಲಂಕೇಶ್ ನೇತೃತ್ವದ ತಂಡ ಕಾರ್ಯನಿರ್ವಹಿಸುತ್ತಿತ್ತು. ಅವರ ಈ ಪ್ರಯತ್ನಗಳು ಯಶಸ್ವಿ ಕೂಡ ಆಗಿತ್ತು. ನಕ್ಸಲರಾಗಿದ್ದ ದಂಪತಿಗಳಿಬ್ಬರನ್ನು ಗೌರಿ ಲಂಕೇಶ್ ಅವರು ಮುಖ್ಯವಾಹಿನಿಗೆ ತಂದಿದ್ದರು. ಈ ಸಂಬಂಧ ನಕ್ಸಲರು ಸಹೋದರಿ ಮೇಲೆ ದ್ವೇಷ ಬೆಳೆಸಿಕೊಂಡಿದ್ದರು. ಗೌರಯವರಿಗೆ ಹಲವು ಬಾರಿ ದ್ವೇಷಪೂರಿತ ಪತ್ರಗಳು ಕೂಡ ಬಂದಿವೆ. ತನಿಖಾಧಿಕಾರಿಗಳು ನಕ್ಸಲರ ಆಯಾಮದಲ್ಲಿಯೂ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. 
ಬೆದರಿಕೆಗಳು ಬರುತ್ತಿದ್ದರೂ ಗೌರಿ ಲಂಕೇಶ್ ಮಾತ್ರ ಈ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಹೇಳಿಕೊಂಡಿರಲಿಲ್ಲ. ನನ್ನೊಂದಿಗಾಗಲೀ, ತಾಯಿ, ಸಹೋದರಿಯೊಂದಿಗಾಗಲೀ ಹೇಳಿಕೊಂಡಿರಲಿಲ್ಲ. ಕೆಲ ದಿನಗಳ ಹಿಂದಷ್ಟೇ ಗೌರಿ ಲಂಕೇಶ್ ಅವರನ್ನು ಭೇಟಿ ಮಾಡಿ 2 ಗಂಟೆಗಳ ಕಾಲ ಮಾತನಾಡಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಮುಖ್ಯಮಂತ್ರಿಗಳನ್ನು ಭೇಟಿಯಾದ ಸಂದರ್ಭದಲ್ಲಿಯೂ ತನಗೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಅವರು ಹೇಳಿಕೊಂಡಿಲ್ಲ. 
ರಾಜ್ಯ ಸರ್ಕಾರ ಎಸ್ಐಟಿ ತನಿಖೆಯಲ್ಲಿ ನನಗೆ ಯಾವುದೇ ರೀತಿಯ ವಿಶ್ವಾಸವಿಲ್ಲ. ಇದೇ ಸರ್ಕಾರದ ಅವಧಿಯಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆ. ಆದರೆ, ಸತ್ಯ ಮಾತ್ರ ಹೊರಗೆ ಬಂದಿಲ್ಲ. ಹೀಗಾಗಿ ಸಹೋದರಿಯ ಹತ್ಯೆ ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. 
ಇದೇ ವೇಳೆ ಹತ್ಯೆ ಪ್ರಕರಣ ಸಂಬಂಧ ಆರ್'ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಕಿಡಿಕಾರಿರುವ ಅವರು, ರಾಹುಲ್ ಗಾಂಧಿಯವರು ನನ್ನ ಸಹೋದರಿಯ ಹತ್ಯೆ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಬಾರದು. ಹಂತಕರು ಇವರೇ ಎಂದು ನಿಮಗೆ ಸ್ಪಷ್ಟವಾಗಿ ಗೊತ್ತಿದ್ದರೆ ಅಥವಾ ಮಾಹಿತಿ ಇದ್ದರೆ ಅದನ್ನು ನೇರವಾಗಿ ತನಿಖಾಧಿಕಾರಿಗಳಿಗೆ ನೀಡಲಿ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com