

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ಹುಬ್ಬಳ್ಳಿಗೆ ಬಂದಿಳಿದ್ದ ವಿಮಾನದಲ್ಲಿನ ತಾಂತ್ರಿಕ ದೋಷ ಘಟನೆಯ ತನಿಖೆಗಾಗಿ ಇಬ್ಬರು ಸದಸ್ಯರನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು, ಎರಡು ಮೂರು ವಾರಗಳೊಳಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ.
ಈ ಮಧ್ಯೆ ಆಟೋಪೈಲಟ್ ವೈಫಲ್ಯ ವಿರಳವೇನಲ್ಲ ಎಂದು ರಾಹುಲ್ ವಿಮಾನ ತಾಂತ್ರಿಕ ದೋಷ ಕುರಿತ ಡಿಜಿಸಿಎ ವರದಿಯಲ್ಲಿ ತಿಳಿಸಲಾಗಿದೆ.
ವಿಮಾನವು ರೇಡಾರ್‌ನಿಂದ ಸಂಪರ್ಕ ಕಳೆದುಕೊಂಡಿತ್ತು ಎಂದು ಕಾಂಗ್ರೆಸ್ ಹೇಳಿದ್ದು, ರಾಹುಲ್ ಗಾಂಧಿ ಆಪ್ತ ಕೌಶಲ್ ವಿದ್ಯಾರ್ಥಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್ . ರಾಜು ಅವರಿಗೆ ದೂರು ಸಲ್ಲಿಸಿದ್ದು, ಘಟನೆ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ ತನ್ನ ಆಪ್ತರಾದ ಅವರೊಂದಿಗೆ ಅವರ ಆಪ್ತರಾದ ವಿದ್ಯಾರ್ಥಿ, ರಾಮ್ ಪ್ರೀತ್, ರಾಹುಲ್ ರವಿ ಮತ್ತು ಭದ್ರತಾ ಸಿಬ್ಬಂದಿಗಳೊಂದಿಗೆ ಏ. 26 ರಂದು ನವದೆಹಲಿಯಿಂದ ಹುಬ್ಬಳ್ಳಿಗೆ ವಿಶೇಷ ವಿಮಾನದಲ್ಲಿ (ವಿಟಿ- ಎವಿಹೆಚ್ ) ಪ್ರಯಾಣಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ನವದೆಹಲಿಯಿಂದ ಬೆಳಿಗ್ಗೆ 9-20ಕ್ಕೆ ಹಾರಾಟ ಆರಂಭಿಸಿದ ವಿಮಾನದಲ್ಲಿ ಅನಿರೀಕ್ಷಿತ ತಾಂತ್ರಿಕ ದೋಷ ಕಂಡುಬಂದಿದೆ. 10-45 ರ ಸುಮಾರಿನಲ್ಲಿ ವಿಮಾನ ಅಲುಗಾಡುತ್ತಾ ಹಠಾತ್ತನೇ ಇಳಿಜಾರಿನಲ್ಲಿ ಎತ್ತರದಿಂದ ಅತೀವವಾಗಿ ಕುಸಿದಿದೆ.
ಹೊರಗಡೆ ಸಾಮಾನ್ಯ ಬಿಸಿಲಿನ ವಾತವಾರಣವಿದ್ದು, ಗಾಳಿ ಏನೋ ಬೀಸುತ್ತಿರಲಿಲ್ಲ ಎಂಬುದನ್ನು ಪ್ರತ್ಯೇಕ್ಷದರ್ಶಿಗಳು ನೋಡಿದ್ದಾರೆ. ವಿಮಾನದ ಆಟೋಪಿಲೈಟ್ ಕೆಲಸ ಮಾಡುತ್ತಿರಲಿಲ್ಲ ಎಂಬುದು ಕಂಡುಬಂದಿದ್ದು, ಬೆಳಿಗ್ಗೆ 11-25ರ ವೇಳೆಗೆ ನಡುಕದ ಶಬ್ದದೊಂದಿಗೆ ಹುಬ್ಬಳ್ಳಿಗೆ ಬಂದಿಳಿಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಮಾನವು ರೇಡಾರ್‌ನಿಂದ ಸಂಪರ್ಕ ಕಳೆದುಕೊಂಡಿತ್ತು ಎಂದು ದೂರುದಾರರು ದೂರು ಸಲ್ಲಿಸಿದ್ದಾರೆ. ಇದೊಂದು ಗಂಭೀರ ವಿಚಾರವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಮನವಿ ಸಲ್ಲಿಸಿರುವುದಾಗಿ ದೂರುದಾರರು ತಿಳಿಸಿದ್ದಾರೆ.