ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತ, ಅವರ ಎಲ್ಲಾ ವ್ಯವಹಾರಗಳ ಆಡಿಟ್ ನಡೆಸುವ ಚಾರ್ಟರ್ ಅಕೌಂಟೆಂಟ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿರುವ ಅಧಿಕಾರಿಗಳು ಕೆಲ ಮಹತ್ವದ ಕಡತಗಳ ವಶಕ್ಕೆ ಪಡೆದಿದ್ದಲ್ಲದೆ ವಿಧಾನಸೌಧ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ.
ಮುಖ್ಯಮಂತ್ರಿಗಳ ಲೆಕ್ಕ ಪರಿಶೋಧಕರಾದ ಎಚ್.ಬಿ.ಸುನಿಲ್ ಅವರ ಮನೆ, ಕಛೇರಿಯ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ಸುನೀಲ್ ಅವರ ಜೆ.ಪಿನಗರದ ಮನೆ, ಗುಟ್ಟಹಳ್ಳಿಯ ಕಛೇರಿಗಳ ಮೇಲೆ ಗುರುವಾರ ಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಸಿಎ ಸುನೀಲ್ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರರ ಲೆಕ್ಕ ಪತ್ರ ವ್ಯವಹಾರ ಸಹ ನಿಬಾಯಿಸುತ್ತಿದ್ದಾರೆ. ಇದರೋಡನೆ ಹಲವು ರಾಜಕಾರಣಿಗಳು, ಸಿನಿಮಾ ರಂಗದ ಗಣ್ಯರು, ಉದ್ಯಮಿಗಳ ದಾಖಲೆಗಳನ್ನು ಸಹ ನೋಡಿಕೊಳ್ಳುವ ಕೆಲಸ ನಿರ್ವಹಿಸುತ್ತಿದ್ದರು.
ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತ, ಸಿಎ ಮನೆ ಮೇಲೆ ತೆರಿಗೆ ಇಲಾಖೆ ದಾಳಿ ನಡೆಸಿರುವುದು ಅವರ ಆಪ್ತರಲ್ಲಿ ಆತಂಕವನ್ನುಂಟು ಮಾಡಿದೆ. ಹಲವು ಸಚಿವರು, ಆಪ್ತರು ಕುಮಾರಸ್ವಾಮಿ ಅವರೊಡನೆ ಈ ವಿಚಾರ ಪ್ರಸ್ತಾಪಿಸಿದ್ದು ಕೆಲವರು ತಮ್ಮ ಅಸಮಾಧಾನ ಸಹ ಹೊರಹಾಕಿದ್ದಾರೆ.=