ಮೇಕೆದಾಟು ಯೋಜನೆಗೆ ವಿನಾಕಾರಣ ಅಡ್ಡಿ: ತಮಿಳುನಾಡು ವಿರುದ್ಧ ಕರ್ನಾಟಕ ಕಿಡಿ

ಮೇಕೆದಾಟು ಯೋಜನೆಗೆ ವಿನಾಕಾರಣ ಅಡ್ಡಿ ಪಡಿಸುತ್ತಿದ್ದು, ರಾಜ್ಯಕ್ಕಿಂತ ತಮಿಳುನಾಡಿಗೆ ಮೇಕೆದಾಟು ಯೋಜನೆಯಿಂದ ಹೆಚ್ಚು ಅನುಕೂಲವಿದೆ ಎಂದು ಕರ್ನಾಟಕ ಸರ್ಕಾರ ತಮಿಳುನಾಡು ವಿರುದ್ಧ ಕಿಡಿಕಾರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮೇಕೆದಾಟು ಯೋಜನೆಗೆ ವಿನಾಕಾರಣ ಅಡ್ಡಿ ಪಡಿಸುತ್ತಿದ್ದು, ರಾಜ್ಯಕ್ಕಿಂತ ತಮಿಳುನಾಡಿಗೆ ಮೇಕೆದಾಟು ಯೋಜನೆಯಿಂದ ಹೆಚ್ಚು ಅನುಕೂಲವಿದೆ ಎಂದು ಕರ್ನಾಟಕ ಸರ್ಕಾರ ತಮಿಳುನಾಡು ವಿರುದ್ಧ ಕಿಡಿಕಾರಿದೆ.
ಈ ಬಗ್ಗೆ ವಿಧಾನಸೌಧದಲ್ಲಿ ಮಾಜಿ ಸಿಎಂಗಳು ಹಾಗೂ ಮಾಜಿ ನೀರಾವರಿ ಸಚಿವರೊಂದಿಗೆ ಸಭೆ ನಡೆಸಿದ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರು, ತಮಿಳುನಾಡು ಸರ್ಕಾರ ರಾಜಕೀಯ ಕಾರಣಗಳಿಂದ ಯೋಜನೆಯನ್ನು ವಿರೋಧಿಸುತ್ತಿದೆ. ರಾಜ್ಯಕ್ಕಿಂತ ತಮಿಳುನಾಡಿಗೆ ಮೇಕೆದಾಟು ಯೋಜನೆಯಿಂದ ಹೆಚ್ಚು ಅನುಕೂಲವಿದೆ, ಹೀಗಿದ್ದೂ ಮೇಕೆದಾಟು ಯೋಜನೆಗೆ ವಿನಾಕಾರಣ ಅಡ್ಡಿ ಪಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ತಮಿಳುನಾಡು ಮೇಕೆದಾಟು ವಿಚಾರ ಚರ್ಚೆಗೆ ವಿಶೇಷ ಅಧಿವೇಶನ ಕರೆದಿರುವುದು ದಿಗ್ಭ್ರಮೆ ಮೂಡಿಸಿದೆ. ತಕರಾರು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಬೇಕಾದ ಅರ್ಜಿ ಸ್ವರೂಪದ ಬಗ್ಗೆಯೂ ಇತ್ಯರ್ಥ ಮಾಡಲಾಗಿದೆ. ತಮಿಳುನಾಡು ಜತೆ ನಮಗೆ ಮನಸ್ತಾಪ, ತಗಾದೆ ಬೇಕಿಲ್ಲ. ಆದರೆ ಯಾವುದೇ ಕಾರಣಕ್ಕೂ ರಾಜ್ಯದ ಹಿತವನ್ನು ಬಲಿಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.
ಅಂತೆಯೇ ಕಾವೇರಿ ನದಿ ಪ್ರಾಧಿಕಾರ ಕರ್ನಾಟಕವು ತಮಿಳುನಾಡಿಗೆ ಬಿಡುಗಡೆ ಮಾಡಲು ನಿಗದಿ ಮಾಡಿರುವ ಪ್ರಮಾಣ ವಾರ್ಷಿಕ 177.25 ಟಿಎಂಸಿ. ಉತ್ತಮ ಮಳೆ ಹಿನ್ನೆಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ ಕರ್ನಾಟಕ ಬಿಡುಗಡೆ ಮಾಡಿರುವ ಪ್ರಮಾಣ 397 ಟಿಎಂಸಿ. ಆದರೆ ತಮಿಳುನಾಡು ಬಳಕೆ ಮಾಡಿಕೊಂಡದ್ದು ಕೇವಲ 150 ಟಿಎಂಸಿ. ಉಳಿದ ನೀರು ಸಮುದ್ರ ಸೇರಿ ಪೋಲಾಯಿತು. ಈಗ ಮೇಕೆದಾಟುನಲ್ಲಿ ನಾವು ಮಾಡುತ್ತಿರುವ ಯೋಜನೆಯಿಂದ ಸಂಗ್ರಹವಾಗುವ ನೀರಿನ ಪ್ರಮಾಣ ಕೇವಲ 60 ಟಿಎಂಸಿ. ವಿದ್ಯುತ್ ಉತ್ಪಾದನೆ ನಂತರ ಆ ನೀರು ಕೂಡ ತಮಿಳುನಾಡಿಗೇ ಹರಿದು ಹೋಗುತ್ತದೆ. ನಮ್ಮ ದುಡ್ಡಿನಲ್ಲಿ ಅವರಿಗಾಗಿ ನೀರು ಸಂಗ್ರಹ ಮಾಡುವ ಈ ಯೋಜನೆಯನ್ನು ಅವರು ವಿರೋಧಿಸುತ್ತಿರುವುದು ಹತ್ತಿರದಲ್ಲೇ ಇರುವ ಲೋಕಸಭೆ ಚುನಾವಣೆಗಾಗಿಯೇ ಹೊರತು ಬೇರಾವುದಕ್ಕೂ ಅಲ್ಲ ಎಂದರು.
ಯೋಜನೆಯಿಂದ ತಮಿಳುನಾಡಿಗೆ ಕೇಂದ್ರ ಜಲ ಆಯೋಗದ ನಿರ್ದೇಶನದಂತೆ ನೀರು ಹರಿಸಲು ಸಾಧ್ಯವಾಗುತ್ತದೆ. ಯೋಜನೆ ವ್ಯಾಪ್ತಿಯಲ್ಲಿ ಒಂದೇ ಒಂದು ಎಕರೆ ಭೂಮಿಯಲ್ಲೂ ನೀರಾವರಿ ಮಾಡಲು ಆಗುವುದಿಲ್ಲ. ಅದಕ್ಕೆ ಅವಕಾಶ ನೀಡಲೂ ಸರ್ಕಾರ ಸಿದ್ಧವಿಲ್ಲ. ನದಿ ನೀರು ನಿರ್ವಹಣೆ ಕಾವೇರಿ ಜಲ ಆಯೋಗದ ಪರಿಮಿತಿಯಲ್ಲಿರುವುದರಿಂದ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಳ್ಳುವಂತಿಲ್ಲ. ಮೇಕೆದಾಟು ಯೋಜನೆಯಿಂದ ರಾಜ್ಯದ 4,996 ಹೆಕ್ಟೇರ್ ಭೂಮಿ ಮುಳುಗಡೆ ಆಗುತ್ತಿದೆ. ಇದರಲ್ಲಿ 296 ಹೆಕ್ಟೇರ್ ಮಾತ್ರ ರೆವಿನ್ಯೂ ಭೂಮಿಯಿದೆ. ಆ ಸುತ್ತಲೂ ನೀರಾವರಿಗೆ ಒಂದು ಎಕರೆ ಜಾಗ ಕೂಡ ಉಳಿಯುವುದಿಲ್ಲ. ಕೇಂದ್ರ ಸರ್ಕಾರ ಅದೆಲ್ಲವನ್ನೂ ಕೂಲಂಕುಷವಾಗಿ ಪರಾಮರ್ಶಿಯೇ ಯೋಜನೆಗೆ ಅನುಮತಿ ನೀಡಿದೆ. ನ್ಯಾಯಾಲಯ, ಕೇಂದ್ರ ಜಲ ಆಯೋಗ ಕೊಟ್ಟಿರುವ ಆದೇಶ ಮತ್ತು ಅವಕಾಶದ ಪರಿಮಿತಿಯಲ್ಲೇ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಅದಕ್ಕಿಂಥ ಒಂದಿಂಚೂ ಆಚೀಚೆ ಕದಲುವುದಿಲ್ಲ ಎಂಬ ಭರವಸೆಯನ್ನು ಡಿಕೆಶಿ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com