ಬೋಗಿಬೀಲ್ ನಮ್ಮ ಕನಸಿನ ಯೋಜನೆಯಾಗಿತ್ತು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ
ಭಾರತದ ಅತಿ ಉದ್ದನೆಯ ರೈಲು-ರಸ್ತೆ ಸೇತುವೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಲೋಕಾರ್ಪಣೆ ಮಾಡಿದ್ದು, ಈ ನಡುವಲ್ಲೇ ಸೇತುವೆಯ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಮಾಜಿ ಪ್ರಧಾನಮಂತ್ರಿ...
ಬೆಂಗಳೂರು: ಭಾರತದ ಅತಿ ಉದ್ದನೆಯ ರೈಲು-ರಸ್ತೆ ಸೇತುವೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಲೋಕಾರ್ಪಣೆ ಮಾಡಿದ್ದು, ಈ ನಡುವಲ್ಲೇ ಸೇತುವೆಯ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ನೆನೆದಿದ್ದಾರೆ.
ಸೇತುವೆ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ತಮ್ಮ ಅಧಿಕಾರಾವಧಿಯಲ್ಲಿ ದೇಶವನ್ನು ಆಳಿತ ಮೂವರು ಪ್ರಧಾನಮಂತ್ರಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಅಲ್ಲದೆ, ಯೋಜನೆ ನಮ್ಮ ಸರ್ಕಾರದ ಕನಸಿನ ಯೋಜನೆಯಾಗಿತ್ತು ಎಂದು ಹೇಳಿದ್ದಾರೆ.
ಬೋಗಿಬೀಲ್ ಸೇತುವೆ ಭಾರತ ಉತ್ತಮ ಸಂಪರ್ಕವನ್ನು ಹೊಂದಿರುವ ಸಂಕೇತವನ್ನು ಸೂಚಿಸುತ್ತದೆ. ನಮ್ಮ ಸರ್ಕಾರದ ಕನಸಿನ ಯೋಜನೆಯನ್ನು ಪೂರ್ಣಗೊಳಿಸಿದ್ದಕ್ಕೆ ಅಟಲ್ ಬಿಹಾರಿ ವಾಜಪೇಯಿ, ಡಾ.ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿಯವರಿಗೆ ಈ ಮೂಲಕ ಧನ್ಯವಾದಗಳನ್ನು ಹೇಳಲು ಇಚ್ಛಿಸುತ್ತೇನೆಂದು ತಿಳಿಸಿದ್ದಾರೆ.
ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 4.94 ಕಿ.ಮೀ ಉದ್ದದ ಬೋಗಿಬೀಲ್ ಸೇತುವೆಯಿಂದಾಗಿ ಅಸ್ಸಾಂನ ತಿನ್ಸುಕಿಯಾ ಮತ್ತು ಅರುಣಾಚಲಪ್ರದೇಶದ ನಹರ್ ಲಗೂನ್ ಪಟ್ಟಣದ ನಡುವಿನ ಸಂಚಾರ ಅವಧಿ 10 ಗಂಟೆಗಳು ಕಡಿಮೆಯಾಗಲಿದೆ.