ಹೊಸ ವರ್ಷ: ಇಸಿಸ್ ಅಡಗುತಾಣಗಳ ಮೇಲೆ ಎನ್ಐಎ ದಾಳಿ ಬಳಿಕ ನಗರದಲ್ಲಿ ಹೈ ಅಲರ್ಟ್
ರಾಜಧಾನಿ ದೆಹಲಿ ಹಾಗೂ ಉತ್ತರಪ್ರದೇಶದಲ್ಲಿದ್ದ ಇಸಿಸ್ ಅಡಗುತಾಣಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಅಧಿಕಾರಿಗಳು ದಾಳಿ ನಡೆಸಿದ ಹಿನ್ನಲೆಯಲ್ಲಿ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ವಯ...
ಬೆಂಗಳೂರು: ರಾಜಧಾನಿ ದೆಹಲಿ ಹಾಗೂ ಉತ್ತರಪ್ರದೇಶದಲ್ಲಿದ್ದ ಇಸಿಸ್ ಅಡಗುತಾಣಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಅಧಿಕಾರಿಗಳು ದಾಳಿ ನಡೆಸಿದ ಹಿನ್ನಲೆಯಲ್ಲಿ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ವಯ ನಗರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಗುಪ್ತಚರ ಇಲಾಖೆ ನೀಡಿರುವ ಎಚ್ಚರಿಕೆ ಹಿನ್ನಲೆಯಲ್ಲಿ ಕಟ್ಟೆಚ್ಚರ ವಹಿಸಿರುವ ನಗರ ಪೊಲೀಸರು ಹೊಸ ವರ್ಷಾಚರಣೆ ದಿನದಂದು ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಬೆಳಗಾವಿ, ಮೈಸೂರು, ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲಿ ಈಗಾಗಲೇ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಇದರಂತೆ ನಗರದ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರು, ನಗರದಲ್ಲಿರುವ ಮಾಲ್ ಗಳು ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ಗಳಲ್ಲಿ ಭದ್ರತೆಗಳನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಶಂಕಿತ ಚಲನವಲನಗಳ ಮೇಲೆ ಕಣ್ಗಾವಲಿರಿಸುವ ಸಲುವಾಗಿ ಸೂಕ್ಷ್ಮ ಪ್ರದೇಶಗಳು ಹಾಗೂ ಜನನಿ ಬಿಡ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮೆರಾಗಳು ಹಾಗೂ ಸಿಸಿಟಿವಿಗಳನ್ನು ಬಳಕೆ ಮಾಡಲಾಗುತ್ತದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದಂತೆ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿಶೇಷ ತಂಡಗಳಲ್ಲಿರುವ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಮಹಿಳೆಯರು ಹಾಗೂ ಅಪ್ರಾಪ್ತರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಹೊಸ ವರ್ಷಾಚರಣೆ ವೇಳೆ ಖಾಸಗಿ ಟ್ಯಾಕ್ಸಿ ಸೇವೆಗಹಳ ಮೇಲೂ ಕಣ್ಗಾವಲಿರಿಸಲಾಗಿದೆ. ಮಹಿಳೆಯರಿಗೆ ಭದ್ರತೆಯೊದಗಿಸುವಂತೆ ಖಾಸಗಿ ವಾಹನ ಚಾಲಕರಿಗೆ ಸೂಚನೆ ನೀಡಲಾಗಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಬಾರ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಸೂಚಿಸಲಾಗಿದೆ ಎಂದಿದ್ದಾರೆ.