

ಬೆಂಗಳೂರು: ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತದಾರರನ್ನು ಸೆಳೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2018-19ನೇ ಸಾಲಿನಲ್ಲಿ 9326.87 ಕೋಟಿ ರೂಪಾಯಿ ಯೋಜನೆಯ ಬಜೆಟ್ ನ್ನು ಮಂಡಿಸಿದೆ.
ಹಣಕಾಸಿನ ಅಶಿಸ್ತಿಗೆ ಹೆಸರಾಗಿರುವ ಬಿಬಿಎಂಪಿ ವಾಸ್ತವಕ್ಕಿಂತ ಹೆಚ್ಚು ಆದಾಯ ಸಂಗ್ರಹಣೆಯನ್ನು ಅಂದಾಜು ಮಾಡಿದೆ.
ಆದಾಯ ವೆಚ್ಚ 9,325.53 ಕೋಟಿ ರೂಪಾಯಿ ಎಂದು ಬಜೆಟ್ ನಲ್ಲಿ ಅಂದಾಜಿಸಲಾಗಿದೆ. ಬಿಬಿಎಂಪಿಯ ತೆರಿಗೆ ಮತ್ತು ಹಣಕಾಸು ಸಮಿತಿ ಅಧ್ಯಕ್ಷ ಹಾಗೂ ಜೆಡಿಎಸ್ ಪಕ್ಷದ ಎಂ. ಮಹದೇವ್ ಮಂಡಿಸಿದರು. ಬಜೆಟ್ ನಲ್ಲಿ 1.34 ಕೋಟಿ ರೂಪಾಯಿ ಉಳಿತಾಯ ತೋರಿಸಲಾಗಿದೆ. 2017-18ರಲ್ಲಿ ಇಟ್ಟ ಗುರಿಯಲ್ಲಿ ಅರ್ಧದಷ್ಟನ್ನು ಈಡೇರಿಸದಿದ್ದರೂ ಕೂಡ ಆದಾಯ ಸಂಗ್ರಹಣೆಯನ್ನು ಸಾಮರ್ಥ್ಯಕ್ಕಿಂತ ಅಧಿಕವಾಗಿ ತೋರಿಸಲಾಗಿದೆ. ಆದರೆ ಮೂಲಭೂತ ಸೌಕರ್ಯಗಳ ಸುಧಾರಣೆಗೆ ಯಾವುದೇ ಹೊಸ ಯೋಜನೆಗಳನ್ನು ಪ್ರಕಟಿಸಿಲ್ಲ.
ನಗರ ಪ್ರದೇಶದ ಬಡವರು, ಮಹಿಳೆಯರು ಮತ್ತು ಮಂಗಳಮುಖಿಯರನ್ನು ಕೇಂದ್ರವಾಗಿಟ್ಟುಕೊಂಡು ಬಜೆಟ್ ನಲ್ಲಿ ಬಹುಸಂಖ್ಯೆಯ ಮತದಾರರನ್ನು ಸೆಳೆಯಲು ಪ್ರಯತ್ನಿಸಲಾಗಿದೆ. ಅಶಕ್ತರಿಗೆ ಜೈಪುರ ಕಾಲು, ಮೂರು ಚಕ್ರದ ಬೈಕ್, ವಾಕಿಂಗ್ ಸ್ಟಿಕ್, ಕಿವಿಕೇಳಿಸುವ ಉಪಕರಣ, ಕನ್ನಡಕ ಇತ್ಯಾದಿಗಳನ್ನು ನೀಡುವುದಾಗಿ ಘೋಷಿಸಲಾಗಿದೆ. ಮಂಗಳಮುಖಿಯರಿಗೆ ಉಚಿತ ಬಸ್ ಪಾಸ್ ವಿತರಣೆಯನ್ನು ಮಾಡಲಾಗುತ್ತಿದೆ. ಬಡಜನತೆಗೆ ಶವಾಗಾರಕ್ಕೆ ಶವವನ್ನು ಕೊಂಡೊಯ್ಯಲು ವಿಳಂಬವಾಗುತ್ತಿದ್ದರೆ ಅಂತವರಿಗೆ ಸಹಾಯವಾಗಲು ನಗರದ ಪ್ರತಿ ವಲಯಗಳಲ್ಲಿ 5 ಶಿತಿಲಾಗಾರಗಳನ್ನು ಸ್ಥಾಪಿಸಲಾಗುವುದು ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.