ದೀಪಕ್ ರಾವ್ ಕೊಲೆ ಪ್ರಕರಣ: ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ರೂ.1,20,000 ಬಹುಮಾನ
ಬಜರಂಗದಳದ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣ ಭೇದಿಸುವಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರನ್ನು ಎಡಿಜಿಪಿ ಕಮಲ್ ಪಂತ್ ಅವರು ಪ್ರಶಂಸಿಸಿದ್ದು, ರೂ.1,20,000 ಬಹುಮಾನ ಘೋಷಣೆ ಮಾಡಿದ್ದಾರೆ...
ಮಂಗಳೂರು: ಬಜರಂಗದಳದ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣ ಭೇದಿಸುವಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರನ್ನು ಎಡಿಜಿಪಿ ಕಮಲ್ ಪಂತ್ ಅವರು ಪ್ರಶಂಸಿಸಿದ್ದು, ರೂ.1,20,000 ಬಹುಮಾನ ಘೋಷಣೆ ಮಾಡಿದ್ದಾರೆ.
ದೀಪಕ್ ಹತ್ಯೆ ನಡೆದ 5 ಗಂಟೆಗಳ ಒಳಗಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಒಟ್ಟು ನಾಲ್ವರು ಆರೋಪಿಗಳನ್ನು ಬುಧವಾರ ಬಂಧನಕ್ಕೊಳಪಡಿಸಿದ್ದರು. ಗೃಹ ರಕ್ಷಕ ದಳದ ಸಿಬ್ಬಂದಿ ಹರೀಶ್ ಸೇರಿದಂತೆ ಒಟ್ಟು 6 ಮಂದಿ ಪೊಲೀಸರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದರು.
ಪ್ರಕರಣ ಸಂಬಂಧ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು ಎಡಿಜಿಪಿ ಕಮಲ್ ಪಂತ್ ಅವರು, ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ದೀಪಕ್ ನನ್ನು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ ಕಾರಿನ ಸಂಖ್ಯೆಯನ್ನು ದಾಖಲಿಸಿಕೊಂಡಿದ್ದ ಪೊಲೀಸರು ಎಲ್ಲಾ ಚೆಕ್ ಪೋಸ್ಟ್ ಗಳಿಗೂ ಮಾಹಿತಿಯನ್ನು ರವಾನಿಸಿದ್ದರು. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಂಜೆ ಎಂಬ ಸ್ಥಳದಲ್ಲಿ ಕಾರು ಬಂದಿದೆ. ಈ ವೇಳೆ ಗೃಹ ರಕ್ಷಕ ದಳದ ಸಿಬ್ಬಂದಿ ಹರೀಶಅ ಅವರು ಚೆಕ್ ಪೋಸ್ಟ್ ಬಳಿ ಕಾರ್ಯನಿರ್ವಹಿಸುತ್ತಿದ್ದರು. ಪೊಲೀಸರು ಪರಿಶೀಲನೆ ನಡೆಸುತ್ತಿದ್ದುದ್ದನ್ನು ಕಂಡ ಆರೋಪಿಗಳು ಕೂಡಲೇ ಕಾರನ್ನು ಹಿಂದಕ್ಕೆ ತಿರುಗಿಸಿದ್ದಾರೆ.
ಬಳಿಕ ಎಎಸ್ಐ ಚಂದ್ರಶೇಖರ್, ಎಸ್ಐ ಶೀತಲ್ ಅಲಗುರು ಅವರು ಆರೋಪಿಗಳನ್ನು ಹಿಂಬಾಲಿಸಿದ್ದಾರೆ. ಈ ವೇಳೆ ಆರೋಪಿಗಳು ಶೀತಲ್ ಅವರ ಮೇಲೆಯೇ ವಾಹನವನ್ನು ಹರಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಪಿಸ್ತೂಲ್ ನಿಂದ 5 ಸುತ್ತು ಆ ಕಾರಿ ಮೇಲೆ ಗುಂಡು ಹಾರಿಸಿ ನಂತರ ಆರೋಪಿಗಳ ಕಾರನ್ನು ಬೆನ್ನಟ್ಟಿದ್ದಾರೆ. ಇದರಂತೆ ಆರೋಪಿಗಳಾದ ಮೊಹಮ್ಮದ್ ಇರ್ಶಾನ್ ಮತ್ತು ನೌಶದ್ ನನ್ನು ಬಂಧನಕ್ಕೊಳಪಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ವೇಳೆ ಆರೋಪಿಗಳಾದ ರಿಜ್ವಾನ್ ಮತ್ತು ಪಿಂಕಿ ನವಾಜ್ ತಪ್ಪಿಸಿಕೊಂಡಿದ್ದರು.
ಬಳಿಕ ಸಿಸಿಬಿ ಇನ್ಸ್ ಪೆಕ್ಟರ್ ಶಾಂತರಾಮ್ ಮತ್ತು ಪನಂಬೂರ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಫೀಕ್ ಅವರು ಇಬ್ಬರನ್ನು ಬಂಧನಕ್ಕೊಳಪಡಿಸಲು ಹುಡುಕಾಟ ಆರಂಭಿಸಿದ್ದರು. ಈ ವೇಳೆ ಆರೋಪಿಗಳಿರುವ ಆಡಗಿರುವ ಮಾಹಿತಿ ತಿಳಿದ ಕೂಡಲೇ ಇಬ್ಬರೂ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದರು. ಈ ವೇಳೆ ಪಿಂಕಿ ಹಾಗೂ ರಿಜ್ವಾನ್ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಿದ್ದರು. ಬಳಿಕ ಪೊಲೀಸರು ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದರು. ಆರೋಪಿಗಳಿಬ್ಬರನ್ನೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆಕೊಡಿಸಲಾಗುತ್ತಿದೆ ಎಂದು ಕಮಲ್ ಪಂತ್ ಅವರು ತಿಳಿಸಿದ್ದಾರೆ.
ಹಲ್ಲೆಗೊಳಗಾಗಿದ್ದ ದೀಪಕ್ ನನ್ನು ರಕ್ಷಿಸಲು ಧಾವಿಸಿದ್ದ ಮುಸ್ಲಿಂ ಯುವಕರು
ಕೆಲ ದಿನಗಳ ಹಿಂದಷ್ಟೇ ಬಕ್ರೀದ್ ಹಬ್ಬ ಆಚರಣೆ ವೇಳೆ ದೇಗುಲಗಳ ಪ್ರವೇಶದ್ವಾರಗಳ ಬಳಿ ತೋರಣ ಕಟ್ಟುವಾಗ ನೌಶದ್, ಪಿಂಕಿ ನವಾಜ್ ಹಾಗೂ ದೀಪಕ್ ನಡುವೆ ಜಗಳವಾಗಿತ್ತು. ಈ ವೇಳೆ ನೌಶದ್ ಹಾಗೂ ಪಿಂಕಿ ದೀಪಕ್ ಅವರನ್ನು ಹತ್ಯೆ ಮಾಡುವ ಬೆದರಿಕೆಯನ್ನು ಹಾಕಿದ್ದರು.
ನೌಶದ್ ಹಾಗೂ ಪಿಂಕಿ ದೀಪಕ್ ಅವರಿಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ದೀಪಕ್ ಗೆಳೆಯರು ಪೊಲೀಸರಿಗೆ ದೂರು ನೀಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಡಿಜಿಪಿ ಕಮಲ್ ಪಂತ್ ಅವರು, ದೀಪಕ್'ಗೆ ಜೀವ ಬೆದರಿಕೆಯಿರುವ ಬಗ್ಗೆ ಆತನ ಗೆಳೆಯರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಸಂಬಂಧ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ದೀಪಕ್ ಗೆಳೆಯರು ಪ್ರತಿಕ್ರಿಯೆ ನೀಡಿ, ನೌಶದ್ ಹಾಗೂ ಪಿಂಕಿ ನವಾಜ್ ದೀಪಕ್ ಜೊತೆ ಜಗಳವಾಗಿದ್ದರು. ಈ ವೇಳೆ ದೀಪಕ್ ಘಟನೆಯ ವಿಡಿಯೋವನ್ನು ಮಾಡಿಕೊಂಡಿದ್ದರು. ಬಳಿಕ ಪಿಂಕಿ ನವಾಜ್ ವಿಡಿಯೋವನ್ನು ಡಿಲಿಟ್ ಮಾಡುವಂತೆ ತಿಳಿಸಿದ್ದ. ಆದರೆ, ಇದಕ್ಕೆ ದೀಪಕ್ ಒಪ್ಪಿರಲಿಲ್ಲ ಎಂದು ಹೇಳಿದ್ದಾರೆ.
ಇನ್ನು ದೀಪಕ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದ ಸಂದರ್ಭದಲ್ಲಿ ದೀಪಕ್ ಅವರ ಮುಸ್ಲಿಂ ಗೆಳೆಯರೇ ಅವರನ್ನು ರಕ್ಷಣೆ ಮಾಡಲು ಯತ್ನ ನಡೆಸಿದ್ದರು. ಇಲ್ಲದೆ, ಹಲ್ಲೆ ನಡೆಸಿದ ಬಳಿಕ ದುಷ್ಕರ್ಮಿಗಳು ಪರಾರಿಯಾಗುತ್ತಿದ್ದ ಕಾರಿನ ಬಗ್ಗೆಯೂ ಪೊಲೀಸರಿಗೆ ಇವರೇ ಮಾಹಿತಿ ನೀಡಿದ್ದರು. ಇದರಿಂದ ಆರೋಪಿಗಳನ್ನು ಬಂಧಿಸಲು ಪೊಲೀಸರಿಗ ಸಹಾಯಕವಾಗಿತ್ತು.