ಬೆಂಗಳೂರು: ರಾಜಕಾಲುವೆಗೆ ಬಿದ್ದು 3 ವರ್ಷದ ಬಾಲಕಿ ಸಾವು

ರಾಜಕಾಲುವೆ ದಾಟಲು ಹಾಕಲಾಗಿದ್ದ ಮರದ ಹಲಗೆ ಮೇಲೆ ನಡೆದು ಹೋಗುತ್ತಿದ್ದ 3 ವರ್ಷದ ಬಾಲಕಿಯೊಬ್ಬಳು ಆಯತಪ್ಪಿ ಕಾಲುವೆಗೆ ಬಿದ್ದು ಮೃತಪಟ್ಟಿರುವ ಘಟನೆ ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರದಲ್ಲಿ ಮಂಗಳವಾರ ನಡೆದಿದೆ...
ಪುತ್ರಿಯನ್ನು ಕಳೆದುಕೊಂಡ ದುಃಖದಲ್ಲಿ ರೋಧಿಸುತ್ತಿರುವ ತಾಯಿ ಹಾಗೂ ಮೃತಪಟ್ಟ ಬಾಲಕಿ ತನುಶ್ರೀ
ಪುತ್ರಿಯನ್ನು ಕಳೆದುಕೊಂಡ ದುಃಖದಲ್ಲಿ ರೋಧಿಸುತ್ತಿರುವ ತಾಯಿ ಹಾಗೂ ಮೃತಪಟ್ಟ ಬಾಲಕಿ ತನುಶ್ರೀ
ಬೆಂಗಳೂರು: ರಾಜಕಾಲುವೆ ದಾಟಲು ಹಾಕಲಾಗಿದ್ದ ಮರದ ಹಲಗೆ ಮೇಲೆ ನಡೆದು ಹೋಗುತ್ತಿದ್ದ 3 ವರ್ಷದ ಬಾಲಕಿಯೊಬ್ಬಳು ಆಯತಪ್ಪಿ ಕಾಲುವೆಗೆ ಬಿದ್ದು ಮೃತಪಟ್ಟಿರುವ ಘಟನೆ ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರದಲ್ಲಿ ಮಂಗಳವಾರ ನಡೆದಿದೆ. 
ಬೊಮ್ಮಸಂದ್ರದ ನಿವಾಸಿಗಳಾಗಿರುವ ಕೂಲಿ ಕಾರ್ಮಿಕ ಸುಬ್ಬಣ್ಣ ಹಾಗೂ ಲಕ್ಷ್ಮೀ ದಂಪತಿಯ ಪುತ್ರಿ ತನುಶ್ರೀ ಮೃತ ದುರ್ದೈವಿ. ಕಲಬುರ್ಗಿಯಿಂದ 30 ಕುಟುಂಬಗಳು 5 ವರ್ಷಗಳ ಹಿಂದೆ ನಗರಕ್ಕೆ ಬಂದಿದೆ. ರಾಜಕಾಲುವೆಯ ಹತ್ತಿರದಲ್ಲಿರುವ ಖಾಸಗಿ ವಲಯಕ್ಕೆ ಸೇರಿದ್ದ ಭೂಮಿಯಲ್ಲಿ ತಾತ್ಕಾಲಿಕ ಶೆಟ್ ನಲ್ಲಿ ವಾಸವಿದ್ದರು. 
ನಿನ್ನೆ ಬೆಳಿಗ್ಗೆ 9.30ರ ಸುಮಾರಿಗೆ ತನುಶ್ರೀ ಶೆಟ್ ಮುಂದೆ ಆಟವಾಡುತ್ತಿದ್ದಳು. ಕೆಲ ನಿಮಿಷಗಳ ಬಳಿಕ ಬಾಲಕಿ ನಾಪತ್ತೆಯಾಗಿರುವುದು ಪೋಷಕರ ಗಮನಕ್ಕೆ ಬಂದಿದೆ. 30 ನಿಮಿಷಗಳ ಬಳಿಕ ಬಾಲಕಿಯ ಮೃತದೇಹ ಕಾಲವೆಯಲ್ಲಿರುವುದು ಕಂಡು ಬಂದಿದೆ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 
ಕೆಲ ವರ್ಷಗಳ ಹಿಂದೆ ರಾಜ್ಯ ಸರ್ಕಾರ ಕಡುಬಡವರಿಗಾಗಿ ಭೂಮಿಯನ್ನು ನೀಡಿತ್ತು ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಕಲಬುರಗಿಯಿಂದ ನಗರಕ್ಕೆ ಬಂದಿದ್ದ ವಲಸಿಗರು ಶೆಡ್ ಗಳಲ್ಲಿ ವಾಸವಿದ್ದರು. ಭೂಮಿಯ ಮಾಲೀಕರಿಗಾಗಿ ಇದೀಗ ಹುಡುಕಾಟ ಆರಂಭಿಸಿದ್ದೇವೆಂದು ಪೊಲೀಸರು ಹೇಳಿದ್ದಾರೆ. 
ಎಂದಿನಿಂತೆ ನಿನ್ನೆ ಕೂಡ ನನ್ನ ಮಗಳು ಶೆಡ್ ಮುಂದೆ ಆಟವಾಡುತ್ತಿದ್ದಳು. 30 ನಿಮಿಷಗಳ ಬಳಿಕ ಆಕೆ ಕಣ್ಮರೆಯಾಗಿದ್ದಳು. ಬಳಿಕ ರಾಜಕಾಲುವೆಯಲ್ಲಿ ಆಕೆ ಬಿದ್ದಿರುವುದನ್ನು ನೋಡಿದಾಗ, ಮಗಳು ನನ್ನನ್ನು ಬಿಟ್ಟು ಅಗಲಿದ್ದಾಳೆಂಬುದನ್ನು ನಂಬಲು ಸಾಧ್ಯವಾಗಲಿಲ್ಲ ಎಂದು ತಾಯಿ ಹೇಳಿದ್ದಾರೆ. 
ಅನಾಮಧೇಯ ಭೂ ಮಾಲೀಕರ ವಿರುದ್ಧ ವಿದ್ಯಾರಣ್ಯ ಪೊಲೀಸರು ಇದೀಗ ನಿರ್ಲಕ್ಷ್ಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. 
ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅವರು , ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ರಾಜಕಾಲುವೆಗೆ ತಡೆಗೋಡೆಯಂತಹ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ವಾರ್ಡ್'ನ ಸಹಾಯಕ ಎಂಜಿನಿಯರ್ ನನ್ನು ಅಮಾನತು ಮಾಡಿದ್ದಾರೆ. ಅಲ್ಲದೆ ಮಗುವಿನ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com