ಮಂಗಳೂರು: ನೈತಿಕ ಪೊಲೀಸ್ ಗಿರಿ ವಿಚಾರ ಬಂದಾಗ ಅನೇಕ ಯುವತಿಯರು ಅಸಹಾಯಕರಾಗುತ್ತಾರೆ. ಸಾಮಾಜಿಕ ಕಳಂಕ ಬರಬಹುದು ಎಂಬ ಭಯದಿಂದ ಕೆಲವು ವಿಚಾರಗಳನ್ನು ಹೆಣ್ಣು ಮಕ್ಕಳು ಹೇಳುವುದೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಂಗಳೂರಿನ ಭಾರತದ ವಿದ್ಯಾರ್ಥಿಗಳ ಒಕ್ಕೂಟ (ಎಸ್ಎಫ್ಐ)ಯ ಕಾರ್ಯಕರ್ತೆ ಇಂತಹ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಲು ಮುಂದಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾದ ಜಿಲ್ಲಾ ಕಾರ್ಯದರ್ಶಿ ಮಾಧುರಿ ಬೋಳಾರ್ ಕಳೆದ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋವನ್ನು ದುರುಪಯೋಗಪಡಿಸಿಕೊಂಡ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಲವ್ ಜಿಹಾದ್ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಫೋಟೋದಿಂದ ತಮ್ಮ ಮಾನ ಹಾನಿಯಾಗುತ್ತಿದೆ ಎಂದು ಪೊಲೀಸ್ ದೂರು ನೀಡಿ ಇದೀಗ ಮಾಧುರಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಮಂಗಳೂರು ನಗರದಲ್ಲಿ ಎಂ.ಕಾಂ ಓದುತ್ತಿರುವ ಮಾಧುರಿಯವರು ಕಳೆದ ವರ್ಷ ಭಾರತೀಯ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾಗ ತೆಗೆದ ಫೋಟೋ ವಾಟ್ಸಾಪ್ ನಲ್ಲಿ ವೈರಲ್ ಆಗಿದೆ ಎಂದು ಆಕೆಯ ಸ್ನೇಹಿತೆಯೊಬ್ಬರು ಹೇಳಿದ್ದರು. ಭಾರತೀಯ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿ ಒಬ್ಬರು ಮುಸಸ್ಮಾನರಾಗಿದ್ದು ಅವರ ಜೊತೆಗೆ ಮಾಧುರಿಯ ಫೋಟೋ ಹಾಕಿ ಅದರಡಿಯಲ್ಲಿ ಈತ ಅನೇಕ ಹಿಂದೂ ಯುವತಿಯರನ್ನು ಪ್ರೀತಿಸಿ ತನ್ನತ್ತ ಸೆಳೆದುಕೊಳ್ಳುತ್ತಾನೆ. ಇದು ಲವ್ ಜಿಹಾದ್ ಆಗಿದ್ದು ಹಿಂದೂ ಸಂಘಟನೆಗಳು ಈ ಯುವಕನಿಗೆ ತಕ್ಕ ಪಾಠ ಕಲಿಸಬೇಕು ಎಂದು ಬರೆದ ಸಂದೇಶಗಳು ವಾಟ್ಸಾಪ್ ನಲ್ಲಿ ಹರಿದಾಡುತ್ತಿದ್ದವು.
ಇದೊಂದು ಸಮಾಜದ ಜನರಿಗೆ ತಪ್ಪು ಅರ್ಥ ಕೊಡುವ ಸಂದೇಶವಾಗಿದ್ದು, ಹಿಂದೂಪರ ಸಂಘಟನೆಗಳಾದ ಭಜರಂಗ ದಳ, ಶ್ರೀರಾಮ ಸೇನೆ, ಕಾಸರಗೋಡು ಹಿಂದೂಗಳು ಮತ್ತು ಇಂತಹ ಅನೇಕ ಸಂಘಟನೆಗಳ ಕಾರ್ಯಕರ್ತರ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿವೆ ಎಂದು ಯುವತಿ ಮಾಧುರಿ ಆರೋಪಿಸಿದ್ದಾರೆ.
ಈ ಬಗ್ಗೆ ಅವರು ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಇತ್ತೀಚೆಗೆ ಮೂಡಿಗೆರೆಯ ಧನ್ಯ ಎಂಬ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲು ಮಾಧುರಿ ನಿಶ್ಚಯಿಸಿದ್ದಾರೆ.