ಪ್ರಧಾನಿ ಮೋದಿ ರಾಜ್ಯ ಭೇಟಿ ವೇಳೆ ಬೆಂಗಳೂರು ಬಂದ್'ಗೆ ಮಹದಾಯಿ ಹೋರಾಟ ಸಮಿತಿ ಕರೆ

ಮಹಾದಾಯಿ ವಿವಾದ ಕುರಿತು ಹೋರಾಟವನ್ನು ಚುರುಕುಗೊಳಿಸಿರುವ ರಾಜ್ಯದ ವಿವಿಧ ಸಂಘಟನೆಗಳು ಜ.25ಕ್ಕೆ ಕರ್ನಾಟಕ ಹಾಗೂ ಫೆ.4ಕ್ಕೆ ಬೆಂಗಳೂರು ಬಂದ್'ಗೆ ಭಾನುವಾರ ಕರೆ ನೀಡಿವೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on: 
ಹುಬ್ಬಳ್ಳಿ: ಮಹಾದಾಯಿ ವಿವಾದ ಕುರಿತು ಹೋರಾಟವನ್ನು ಚುರುಕುಗೊಳಿಸಿರುವ ರಾಜ್ಯದ ವಿವಿಧ ಸಂಘಟನೆಗಳು ಜ.25ಕ್ಕೆ ಕರ್ನಾಟಕ ಹಾಗೂ ಫೆ.4ಕ್ಕೆ ಬೆಂಗಳೂರು ಬಂದ್'ಗೆ ಭಾನುವಾರ ಕರೆ ನೀಡಿವೆ.
ಮಹದಾಯಿ ವಿವಾದದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರವೇಶ ಮಾಡುವಂತೆ ಆಗ್ರಹಿಸಿ, ಪ್ರಧಾನಿ ಮೋದಿಯವರು ರಾಜ್ಯಕ್ಕೆ ಆಗಮಿಸಲಿರುವ ಫೆ.4 ರಂದು ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಬಂದ್ ನಡೆಸಲು ಮಹದಾಯಿ ಹೋರಾಟ ಸಮಿತಿ ತೀರ್ಮಾನಿಸಿದೆ. ಸಂಘಟನೆಗಳ ಬಂದ್ ಕರೆಯಿಂದಾಗಿ 10 ದಿನದ ಅಂತರದಲ್ಲಿ 2 ಬಾರಿ ಬಂದ್ ಬಿಸಿಯನ್ನು ಬೆಂಗಳೂರು ನಗರ ಅನುಭವಿಸಲಿದೆ. 
ಮಹಾದಾಯಿ ವಿವಾದ ಗೋವಾ ಹಾಗೂ ಕರ್ನಾಟಕ ರಾಜ್ಯಗಳ ವೈಮನಸ್ಸನ್ನು ಸೃಷ್ಟಿಸಿದ್ದು, ವಿವಾದ ಇತ್ಯರ್ಥಪಡಿಸುವಂತೆ ಪ್ರಧಾನಮಂತ್ರಿಗಳ ಗಮನವನ್ನು ಸೆಳೆಯುವ ಸಲುವಾಗಿ ಸಂಘಟನೆಗಳು ಈ ರೀತಿಯ ತೀರ್ಮಾನವನ್ನು ಕೈಗೊಂಡಿವೆ. 
ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಫೆ.4ಕ್ಕೆ ನಗರಕ್ಕೆ ಆಗಮಿಸಲಿದ್ದಾರೆ. ಇಲ್ಲದೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೂ ಕೂಡ ಇನ್ನು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ಹಿನ್ನಲೆಯಲ್ಲಿ ರಾಹುಲ್, ಮೋದಿ ರಾಜ್ಯ ಭೇಟಿ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿ ಕಪ್ಪು ಬಾವುಟ ಪ್ರದರ್ಶಿಸಲು ಸಂಘಟನೆಗಳು ನಿರ್ಧರಿಸಿವೆ. 
ಸುದ್ದಿಗೋಷ್ಟಿಯಲ್ಲಿ ವಾಗ್ವಾದ: ಮಹದಾಯಿ ವಿಚಾರವಾಗಿ ವಾಟಾಳ್ ನಾಗರಾಜ್ ಅವರು ಜ.25 ರಂದು ಬಂದ್ ಗೆ ಕರೆ ನೀಡಿದ್ದರು. ಈ ಸಂಬಂಧ ಭಾನುವಾರ ಹುಬ್ಬಳ್ಳಿಯಲ್ಲಿ ಅವರು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಹಾದಾಯಿ ಹೋರಾಟಗಾರರ ಸಮನ್ವಯ ಸಮಿತಿ, ವಿವಿಧ ಸಂಘಟನೆಗಳ ಮುಖಂಡರಿಂದ ಬಂದ್'ಗೆ ತೀವ್ರ ವಿರೋಧ ವ್ಯಕ್ತವಾಯಿತು. ಈ ಭಾಗದ ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಂದ್ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮತ್ತೊಮ್ಮೆ ಹೋರಾಟಗಾರರ ಜತೆಗೆ ಸಭೆ ನಡೆಸಿದ ಬಳಿಕ ವಾಟಾಳ್ ಅವರು ಅಂತಿಮವಾಗಿ ನಿರ್ಧಾರ ಪ್ರಕಟಿಸಿದರು. 
ಜ.25 ರಂದು ಬಂದ್ ಬದಲು ಫೆ.4 ರಂದು ಬಂದ್ ನಡೆಸುವಂತೆ ಘೋಷಣೆ ಕೂಗಿದ ವಿವಿಧ ಸಂಘಟನೆಗಳ ಮುಖಂಡರು, ಬಳಿಕ ಲೋಕನಾಥ್ ಹೆಬಸೂರ ನೇತೃತ್ವದಲ್ಲಿ ಸಭೆ ನಡೆಸಿದರು. ಈ ವೇಳೆ ಹೆಬಸೂರು ಮುಖಂಡರ ಮನವೊಲಿಸುವಲ್ಲಿ ಯಶಸ್ವಿಯಾದರು, ಬಳಿಕ ಮತ್ತೊಮ್ಮೆ ಎಲ್ಲಾ ಸಂಘಟನೆಗಳ ಮುಖಂಡರ ಸಭೆ ನಡೆಸಿದ ಬಳಿಕ ಮಾತನಾಡಿದ ವಾಟಾಳ್ ಅವರು. ಜ.25ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಅಖಂಡ ಕರ್ನಾಟಕ ಬಂದ್ ಹಾಗೂ ಫೆ.4 ರಂದು ಬೆಂಗಳೂರು ಬಂದ್ ನಡೆಸುವ ನಿರ್ಧಾರ ಪ್ರಕಟಿಸಿದರು. ಇದರ ಜೊತೆಗೆ ಫೆ.4 ರ ಬದಲು ಮೋದಿ ರಾಜ್ಯಕ್ಕೆ ಯಾವ ದಿನ ಬರುತ್ತಾರೋ ಅಂದು ಬಂದ್ ಗೆ ಕರೆ ನೀಡಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು. ರಾಹುಲ್ ಗಾಂಧಿ ರಾಜ್ಯಕ್ಕೆ ಬರುವ ಸಂದರ್ಭದಲ್ಲೂ ಕಪ್ಪುಬಟ್ಟೆ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com