ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 30 ದಿನಗಳಲ್ಲಿ ರೂ.80 ಲಕ್ಷ ಲೂಟಿ, ಕೊಲಂಬಿಯಾದ 5 ಕಳ್ಳರ ಬಂಧನ

ಶ್ರೀಮಂತರ ಮನೆ ಗುರುತಿಸಿ ಕಳ್ಳತನ ಮಾಡುತ್ತಿದ್ದ ಕೊಲಂಬಿಯಾ ಮೂಲದ ಐವರು ಕಳ್ಳರನ್ನು ಜಯನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ...
ಬೆಂಗಳೂರು: ಶ್ರೀಮಂತರ ಮನೆ ಗುರುತಿಸಿ ಕಳ್ಳತನ ಮಾಡುತ್ತಿದ್ದ ಕೊಲಂಬಿಯಾ ಮೂಲದ ಐವರು ಕಳ್ಳರನ್ನು ಜಯನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 
ಕೊಲಂಬಿಯಾದ ಜೋಸ್ ಎಡ್ವರ್ಡೋ, ಗುಸ್ತಾವೋ ಅಡಾಲ್ಟೋ, ಯಾಯಿರ್ ಅಲ್ಪರ್ಟೋ, ಸ್ಯಾಂಚಿಯಸ್ ಅಲಿಯಾಸ್ ಪೈಸಾ, ಅಡ್ವರ್ಡ್ ಎಲೆಕ್ಸಿಸ್ ಗಾರ್ಸಿಯಾ ಪರಮೋ ಹಾಗೂ ಆತನ ಪ್ರಿಯತೆ ಕಿಂಬರ್ಲಿ ಗುಟಿಯಾರೀಸ್ ಬಂಧಿತ ಆರೋಪಿಗಳಾಗಿದ್ದಾರೆ. 
ಬಂಧಿತ ಐವರು ಆರೋಪಿಗಲು ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ನಿವೃತ್ತ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿವಯರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದರು. 
ಬಂಧಿತ ಆರೋಪಿಗಳಿಂದ ಪೊಲೀಸರು 950 ಗ್ರಾಂ ತೂಕದ ವಜ್ರದ ಆಭರಣ, ಚಿನ್ನದ ಒಡವೆ, ವಿದೇಶಿ ಕರೆನ್ಸಿ, ದುಬಾರಿ ಮೌಲ್ಯದ 18 ವಿದೇಶಿ ವಾಚ್ ಗಳು, ಪೆನ್ ಗಳು ಹಾಗೂ ಎರಡು ಕಾರುಗಳನ್ನು ಸೇರಿದಂತೆ ಒಟ್ಟು ರೂ.80 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 
2010ರಲ್ಲಿ ನಡೆದಿದ್ದ ಫ್ರೆಡ್ ಹೋಟೆಲ್'ನಲ್ಲಿನ ಕಳ್ಳತನ ಹಾಗೂ 2016ರಲ್ಲಿ ಸದಾಶಿವ ನಗರದಲ್ಲಿರುವ ಶ್ರೀನಿವಾಸಪುರ ಕ್ಷೇತ್ರದ ಮಾಜಿ ಶಾಸಕ ವೆಂಕಟ ಶಿವಾರೆಡ್ಡಿ ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಗಳಾದ ಜೋಸ್ ಮತ್ತು ಎಡ್ವರ್ಡ್ ಭಾಗಿಯಾಗಿರುವುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 
ಬೆಂಗಳೂರು ಐಟಿ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿನ್ನಲೆಯಲ್ಲಿ ಆರೋಪಿಗಳು ಕಳ್ಳತನಕ್ಕೆ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿದ್ದರು. ಶ್ರೀಮಂತರನ್ನು ಗುರಿ ಮಾಡಿಕೊಂಡು ದರೋಡೆ ಮಾಡಲು ಆರಂಭಿಸುತ್ತಿದ್ದರು. 4-5 ತಿಂಗಳ ಹಿಂದೆಯೇ ದರೋಡೆಗೆ ಯೋಜನೆಗಳನ್ನು ರೂಪಿಸುತ್ತಿದ್ದರು. ಯೇರ್ ಅಲ್ಬೆರ್ಟೋ ನಕಲಿ ಅಮೆರಿಕಾದ ಪಾಸ್'ಪೋರ್ಟ್ ಪಡೆದುಕೊಂಡು ಭಾರತಕ್ಕೆ ಬಂದಿದ್ದ. ಭಾರತಕ್ಕೆ ಬರುವುದಕ್ಕೂ ಮುನ್ನವೇ ಬ್ರಿಟನ್ ನಲ್ಲಿರುವ ಭಾರತೀಯ ಮೂಲದವರೊಬ್ಬರ ಬಳಿ ಮನೆಯೊಂದನ್ನು ಪಡೆದುಕೊಕಂಡಿದ್ದರು. 
ಯೋಜನೆಯಂತೆಯೇ ಯೇರ್, ಅಲೆಕ್ಸಿಸ್ ಮತ್ತು ಆತನ ಪ್ರಿಯತಮೆ ಮುಂಬೈಗೆ ಬಂದಿದ್ದರು. ನಂತರ ಜೂನ್ ಮೊದಲ ವಾರದಲ್ಲಿ ಬೆಂಗಳೂರು ನಗರಕ್ಕೆ ಬಂದಿದ್ದರು. ಮತ್ತಿಬ್ಬರು ಆರೋರಿಗಳು ಮೇ ತಿಂಗಳ ಮೂರನೇ ವಾರದಲ್ಲಿ ನೇಪಾಳಕ್ಕೆ ಬಂದಿದ್ದರು. ನಂತರ ಇ-ವೀಸಾ ಪಡೆದ ಆರೋಪಿಗಳು ದೆಹಲಿಗೆ ಆಗಮಿಸಿ ನಂತರ ಬೆಂಗಳೂರಿಗೆ ಬಂದಿದ್ದರು. 
ಬೆಂಗಳೂರು ನಗರದಲ್ಲಿ ಎಲ್ಲಾ ಆರೋಪಿಗಳು ಒಂದೆಡೆ ಸೇರುತ್ತಿದ್ದಂತೆಯೇ ಕಳ್ಳತನಕ್ಕೆ ಬೇಕಾದ ಉಪಕರಣಗಳನ್ನು ಜೆಸಿ ರಸ್ತೆ ಮತ್ತು ಮಾರುಕಟ್ಟೆಯಲ್ಲಿ ಖರೀದಿ ಮಾಡಿದರು. ಬಳಕೆ ಮಾಡಿದ್ದ ಸಿಮ್ ಹಾಗೂ ಮೊಬೈಲ್ ಗಳನ್ನು ಖರೀದಿ ಮಾಡಿದ್ದರು. ಜಿಪಿಎಸ್ ಬಳಕೆ ಮಾಡುವ ಮೂಲಕ ಶ್ರೀಮಂತರ ಮನೆಗಳನ್ನು ಹುಡುಕುತ್ತಿದ್ದರು. ಶ್ರೀಮಂತ ಮನೆ ಸಿಗುತ್ತಿದ್ದಂತೆಯೇ ಯೋಜನೆ ರೂಪಿಸುತ್ತಿದ್ದರು. ಇದರಂತೆ ಮೊದಲಿಗೆ ಮನೆಯೊಳಗೆ ಮೂವರು ನುಗ್ಗುತ್ತಿದ್ದರು. ಒಬ್ಬ ಆರೋಪಿ ಕಾರಿನೊಳಗೆ ಕಾಯುತ್ತಿದ್ದರೆ, ಮಹಿಳೆ ಮನೆಯ ಹೊರಗೆ ನಿಲ್ಲುತ್ತಿದ್ದಳು. ಐವರೂ ಆರೋಪಿಗಳು ವಾಕಿ-ಟಾಕಿಗಳ ಮೂಲಕ ಸಂಪರ್ಕದಲ್ಲಿರುತ್ತಿದ್ದರು. ಕಳ್ಳತನದ ಬಳಿಕ ಎಲ್ಲರೂ ಕಾರಿನಲ್ಲಿ ಪರಾರಿಯಾಗುತ್ತಿದ್ದರು. 
ಆರೋಪಿಗಳು ಯೂಟ್ಯೂಬ್ ನೋಡಿ ಚಿನ್ನ ಕರಗಿಸುವುದನ್ನು ಕಲಿತಿದ್ದರು. ಅದಕ್ಕೆ ಅಗತ್ಯವಾದ ಇಟ್ಟಿಗೆ, ಪಿಒಪಿ, ಗ್ಯಾಸ್ ಬರ್ನರ್ ಹಾಗೂ ಇತರೆ ಪರಿಕರಿಗಳನ್ನು ಖರೀದಿಸಿದ್ದರು. ಬಳಿಕ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಕರಗಿಸಿ, ಪಿಒಪಿಯಲ್ಲಿ ಮಾಡಿದ್ದ ಅಚ್ಚಿಗೆ ಸುರಿದು ಗೋಲ್ಟ್'ಬಾರ್'ಗಳಾಗಿ ಪರಿವರ್ತಿಸುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com