ಮಾನವ ಕಳ್ಳಸಾಗಣೆ: ನಾಪತ್ತೆಯಾಗಿರುವ ಬಾಲಕಿ, ಬಾಲಕರ ಸಂಖ್ಯೆ ನೀಡಿ; ಸರ್ಕಾರಕ್ಕೆ 'ಹೈ' ಸೂಚನೆ

2015ರ ಜ.1 ರಿಂದ ಪ್ರಸಕ್ತ ಸಾಲಿನ ವರೆಗೂ ಮಕ್ಕಳ ನಾಪತ್ತೆ ಕುರಿತು ಎಷ್ಟು ಪ್ರಕರಣಗಳು ದಾಖಲಾಗಿವೆ? ಅದರಲ್ಲಿ ಬಾಲಕರು ಹಾಗೂ ಬಾಲಕಿಯರ ಸಂಖ್ಯೆ ಎಷ್ಟು? ನಾಪತ್ತೆಯಾದವರ ಪೈಕಿ ಎಷ್ಟು ಮಕ್ಕಳನ್ನು ಪತ್ತೆ ಹಚ್ಚಲಾಗಿದೆ?...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: 2015ರ ಜ.1 ರಿಂದ ಪ್ರಸಕ್ತ ಸಾಲಿನ ವರೆಗೂ ಮಕ್ಕಳ ನಾಪತ್ತೆ ಕುರಿತು ಎಷ್ಟು ಪ್ರಕರಣಗಳು ದಾಖಲಾಗಿವೆ? ಅದರಲ್ಲಿ ಬಾಲಕರು ಹಾಗೂ ಬಾಲಕಿಯರ ಸಂಖ್ಯೆ ಎಷ್ಟು? ನಾಪತ್ತೆಯಾದವರ ಪೈಕಿ ಎಷ್ಟು ಮಕ್ಕಳನ್ನು ಪತ್ತೆ ಹಚ್ಚಲಾಗಿದೆ? ಎಂಬುದರ ಕುರಿತು ಅಂಕಿ-ಅಂಶ ಒಳಗೊಂಡ ವರದಿಯನ್ನು ಒದಗಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ. 
ಒಂದೂವರೆ ವರ್ಷದ ಹಿಂದೆ ನಾಪತ್ತೆಯಾಗಿರುವ ತಮ್ಮ ಮಗ ರಾಮ್ ಲಖನ್'ನನ್ನು ಪತ್ತೆ ಹೆಚ್ಚಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಮಧ್ಯಪ್ರದೇಶ ಮೂಲದ ರಘವೀರ್ ರಾಥೋಡ್ ಎಂಬುವವರು ಬರೆದ ಪತ್ರವನ್ನು ಆಧರಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸ್ವಯಂ ಪ್ರೇರಿತ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿದ್ದರು. 
ಮಂಗಳವಾರ ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಹಾಗೂ ನ್ಯಾಯಮೂರ್ತಿ ಹೆಚ್.ಟಿ.ನರೇಂದ್ರ ಪ್ರಸಾದ್ ಅವರಿದ್ಧ ವಿಭಾಗೀಯ ಪೀಠ, ವಲಸೆಗಾರಿಕೆ, ಮಾನವ ಕಳ್ಳಸಾಗನೆ ಮತ್ತು ವೇಶ್ಯವಾಟಿಕೆಗೆ ಹೆಣ್ಣುಮಕ್ಕಳ ಮಾರಾಟ ರಾಷ್ಟ್ರೀಯ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಆತಂಕ ವ್ಯಕ್ತಪಡಿಸಿತು. 
ಮಾನವ ಕಳ್ಳಸಾಗಣೆಗೆ ಕರ್ನಾಟಕವೂ ಹೊರತಾಗಿಲ್ಲ. ಕೇವಲ ರಾಮ್ ಲಖನ್'ನನ್ನು ಪತ್ತೆ ಹಚ್ಚುವುದಲ್ಲದೆ ಈ ಮೂರು ಸಮಸ್ಯೆಗಳ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ನಾವು ಕ್ರಮ ಜರುಗಿಸಬೇಕಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 
ರಾಮ್ ಲಖನ್ 2017ರಲ್ಲಿ ನಾಪತ್ತೆಯಾಗಿದ್ದಾನೆ. ಆದರೆ, ಆತನನ್ನು ಈವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲವೇಕೆ? ಸಚಿವರು ಹಾಗೂ ಶ್ರೀಮಂತರ ಮಕ್ಕಳು ಕಾಣೆಯಾದರೆ 24 ಗಂಟೆಗಳಲ್ಲಿ ಪತ್ತೆ ಹೆಚ್ಚುವ ಪೊಲೀಸರಿಗೆ ಕಾರ್ಮಿಕರು ಹಾಗೂ ಜನ ಸಾಮಾನ್ಯರ ಮಕ್ಕಳೆಂದರೆ ನಿರ್ಲಕ್ಷ್ಯವೇ ಎಂದು ಇದೇ ವೇಳೆ ನ್ಯಾಯಾಲಯ ತೀಕ್ಷ್ಣವಾಗಿ ಪ್ರಶ್ನಿಸಿತು. ಹಾಗೆಯೇ, ರಾಜ್ಯದಲ್ಲಿ ವೇಶ್ಯವಾಟಿಕೆಗೆ ಹುಡುಗಿಯರನ್ನು ತಳ್ಳುವ ಹಾಗೂ ಮಾನವ ಕಳ್ಳಸಾಗಣೆ ಪ್ರಕರಣಗಳ ಮೇಲೆ ಪೊಲೀಸರು ಹೆಚ್ಚಿನ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com