50 ರೂ. ಲಾಕರ್ ಶುಲ್ಕ ಕಟ್ಟಲಾಗದೇ 800 ಕೋಟಿ ರೂ. ಮೌಲ್ಯದ ನಗ, ನಾಣ್ಯ ಕಳೆದುಕೊಂಡ ಉದ್ಯಮಿ!

ನಗರದ ಪ್ರತಿಷ್ಠಿತ ಬೌರಿಂಗ್ ಇನ್ಸ್​ ಟಿಟ್ಯೂಟ್ ಕ್ಲಬ್​ ನ ಲಾಕರ್ ನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಮತ್ತು ಆಸ್ತಿ ಪತ್ರ ಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಪ್ರಕರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳ ಹೆಸರುಗಳು ಕೇಳಿಬರುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ನಗರದ ಪ್ರತಿಷ್ಠಿತ ಬೌರಿಂಗ್ ಇನ್ಸ್​ ಟಿಟ್ಯೂಟ್ ಕ್ಲಬ್​ ನ ಲಾಕರ್ ನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಮತ್ತು ಆಸ್ತಿ ಪತ್ರ ಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಪ್ರಕರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳ ಹೆಸರುಗಳು ಕೇಳಿಬರುತ್ತಿದೆ.
ಬೌರಿಂಗ್ ಇನ್‌ಸ್ಟಿಟ್ಯೂಟ್ ಲಾಕರ್‌ ನಲ್ಲಿ ಸಿಕ್ಕಿ ಬಿದ್ದ ಕೋಟಿ ಕೋಟಿ ರೂ.ಗಳ ನಗನಾಣ್ಯ ಮತ್ತು ಆಸ್ತಿಪತ್ರಗಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ತನಿಖೆ ಮುಂದುವರೆದಿರುವಂತೆಯೇ ಪ್ರಕರಣ ಹಲವು ತಿರುವು ಪಡೆಯುತ್ತಿವೆ. ಇನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಅಂದು ಪತ್ತೆಯಾದ ನಗದು, ಚಿನ್ನಾಭರಣ ಮತ್ತು ಆಸ್ತಿ ಮೌಲ್ಯ 550 ಕೋಟಿ ಅಲ್ಲ ಬದಲಿಗೆ ಬರೊಬ್ಬರಿ 800 ರೂ ಕೋಟಿ ಮೌಲ್ಯದ್ದು ಎಂದು ಆಧಿಕಾರಿಗಳು ಅಂದಾಜಿಸಿದ್ದಾರೆ. 
ಅಂತೆಯೇ ಈ ಪ್ರಕರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳ ಹೆಸರು ಕೂಡ ಕೇಳಿಬರುತ್ತಿದ್ದು, ಲಾಕರ್ ನಲ್ಲಿ 2000ಕ್ಕೂ ಹೆಚ್ಚು ಸಹಿ ಮಾಡಿದ ಖಾಲಿ ಚೆಕ್‌ಗಳು, ಸಹಕಾರ ನಗರದ 5 ಎಕರೆ ಭೂಮಿಗೆ ಸಂಬಂಧಿಸಿದ ದಾಖಲೆಪತ್ರಗಳು (ಇಲ್ಲಿ ಒಂದು ಚದರಡಿಗೆ 8 ರಿಂದ 10,000 ರೂ. ಬೆಲೆಯಿದೆ) ಹಾಗೂ ಶೋಭಾ ಡೆವಲಪಱ್ಸ್, ಇಟ್ಟಿನಾ, ನಿತೀಶ್ ಮತ್ತು ಪ್ರೆಸ್ಟೀಜ್ ಡೆವಲಪಱ್ಸ್ ಸಂಸ್ಥೆಗಳಿಗೆ ಸಂಬಂಧಪಟ್ಟ ದಾಖಲೆಗಳು ದೊರೆತಿವೆ ಎಂದು ತಿಳಿದುಬಂದಿದೆ.
ಅವಿನಾಶ್ ಅಮರ್‌ಲಾಲ್ ಮೈಸೂರಿನಲ್ಲಿ ಮನೆಯೊಂದನ್ನು ಹೊಂದಿದ್ದು, ಬೆಂಗಳೂರಿನ ಪುರಭವನದ ಎದುರಿನ ಕಟ್ಟಡದಲ್ಲಿ ಕಛೇರಿ ಹೊಂದಿದ್ದಾನೆ, ಮಾತ್ರವಲ್ಲ ಲ್ಯಾವೆಲ್ಲೆರೋಡ್, ಶಾಂತಿನಗರ ಸೇರಿದಂತೆ ಹಲವೆಡೆ ಮನೆಗಳನ್ನು ಹೊಂದಿದ್ದಾನೆ. 30×40, 60×40, 80×100 ಹೀಗೆ ವಿವಿಧ ಅಳತೆಗಳ ನೂರಾರು ನಿವೇಶನಗಳೂ ಅವನ ಹೆಸರಿನಲ್ಲಿವೆ ಎಂದು ಆದಾಯ ತೆರಿಗೆ ಇಲಾಖೆಯ ವಿಶ್ವಸನೀಯ ಮೂಲಗಳು ತಿಳಿಸಿವೆ. 
ಲಾಕರ್ ನ 50ರೂ ಶುಲ್ಕ ಕಟ್ಟಲಾಗದೇ 800ರೂ ಕೋಟಿ ಮೌಲ್ಯದ ಆಸ್ತಿ ಕಳೆದುಕೊಂಡು ಸಿಕ್ಕಿ ಬಿದ್ದ ಉದ್ಯಮಿ
ಇನ್ನು ವಿನಾಶ್‌ ನಾಲ್ಕೈದು ವರ್ಷಗಳಿಂದ ಲಾಕರ್‌ ಬಳಸುತ್ತಿದ್ದರು. ಆದರೆ ಇದಕ್ಕೆ ಶುಲ್ಕ ಕಟ್ಟಿರಲಿಲ್ಲ. ಈ ಹಿಂದೆ 5 ರೂ. ಇದ್ದ ಶುಲ್ಕವನ್ನು ಇತ್ತೀಚೆಗೆ ಸಂಸ್ಥೆ 50 ರೂ.ಗೆ ಏರಿಸಲಾಗಿತ್ತು. ಇನ್ನು ಲಾಕರ್ ಹೊಂದಲು ಸಂಸ್ಥೆಯ ಸದಸ್ಯತ್ವ ಮತ್ತು ಲಾಕರ್ ಶುಲ್ಕ ಕಟ್ಟಬೇಕಿತ್ತು. ಆದರೆ ಉದ್ಯಮಿ ಅವಿನಾಶ್ ಸದಸ್ಯತ್ವ ಇಲ್ಲದೇ ಅನಧಿಕೃತವಾಗಿ ಲಾಕರ್ ಹೊಂದಿದ್ದರು. ಇನ್ನು ಸಂಸ್ಥೆಯಲ್ಲಿ ಬ್ಯಾಡ್ಮಿಂಟನ್ ಆಟವಾಡಲು ಬರುತ್ತಿದ್ದ ಇತರೆ ವ್ಯಕ್ತಿಗಳಿಗೆ ಲಾಕರ್ ಕೊರತೆಯುಂಟಾಗಿತ್ತು. 
ಇದರಿಂದ ಸಂಸ್ಥೆ ಸಕ್ರಿಯವಾಗಿರದ ಮತ್ತು ಅನಧಿಕೃತವಾಗಿ ಲಾಕರ್ ಹೊಂದಿರುವವರಿಗೆ ನೋಟಿಸ್ ನೀಡಿ ಲಾಕರ್ ತೆರವು ಮಾಡುವಂತೆ ಅಥವಾ 50 ರೂ ಶುಲ್ಕ ನೀಡಿ ಪರವಾನಗಿ ಮತ್ತು ಸದಸ್ಯತ್ವ ಮಾಡಿಸಿಕೊಳ್ಳುವಂತೆ ವಾಟ್ಸಪ್ ಮತ್ತು ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ನೋಟಿಸ್ ನೀಡಿತ್ತು. ಇದಾವುದಕ್ಕೂ ಉದ್ಯಮಿ ಅವಿನಾಶ್ ಸ್ಪಂದಿಸದ ಕಾರಣ ಎಲ್ಲ ಇತರೆ ಲಾಕರ್ ಗಳಂತೆ ಈ ಲಾಕರ್ ಅನ್ನು ಕೂಡ ಬೀಗ ಒಡೆದು ತೆರೆಯಲಾಗಿತ್ತು. ಜುಲೈ16 ರಿಂದ ಒಟ್ಟು 126 ಲಾಕರ್‌ ಗಳನ್ನು ಮುರಿಯಲಾಗಿದೆ. ಕೊನೆಯ ಬಾರಿ ಲಾಕರ್‌ ಮುರಿದಿದ್ದು, 2000 ಇಸವಿಯಲ್ಲಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಕರ್ ನಲ್ಲಿದ್ದದ್ದು ಬೇನಾಮಿ ಆಸ್ತಿ?
ಅವಿನಾಶ್ ಬೇನಾಮಿ ಆಸ್ತಿ ಹೊಂದಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಅವಿನಾಶ್ ವಿರುದ್ಧ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ 2016ರಲ್ಲಿ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿದ್ದು, ಬೇನಾಮಿ ಆಸ್ತಿ ಹೊಂದಿದ್ದರೆ ಅಂತಹವರಿಗೆ ಈ ಕಾಯ್ದೆಯಡಿ ಭಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆ ವಿಧಿಸಬಹುದಾಗಿದೆ. ಈ ಕಾಯ್ದೆ ಪ್ರಕಾರ 1 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವುದು ಪತ್ತೆಯಾದರೆ 7 ವರ್ಷ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
5 ಕೋಟಿ ರೂ. ಆಮಿಷ
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಕ್ಲಬ್‌ನ ಕಾರ್ಯದರ್ಶಿ ಶ್ರೀಕಾಂತ್, ಜುಲೈ 20ರಂದು ರಾತ್ರಿ 11 ಗಂಟೆವರೆಗೆ ತನಿಖಾಧಿಕಾರಿಗಳ ಜತೆ ಇದ್ದ ನಾನು ಮನೆಗೆ ಹೋಗಿದ್ದೆ. ಅಷ್ಟೋತ್ತಿಗಾಗಲೇ ನಾಲ್ಕೈದು ಬಾರಿ ಅಪರಿಚಿತರು ಬಂದು ಹೋಗಿದ್ದು, ಮನೆಯವರಿಂದ ಗೊತ್ತಾಯಿತು. ಮನೆಯಲ್ಲಿದ್ದಾಗ ಕೆಲ ಹೊತ್ತಿನಲ್ಲೇ ಸದಸ್ಯರೊಬ್ಬರ ಹೆಸರು ಹೇಳಿಕೊಂಡು ಬಂದ ಅಪರಿಚಿತ 5 ಕೋಟಿ ರೂ. ಇಲ್ಲೇ ಕೊಡುತ್ತೇನೆ. ನಿಮಗೆ ಸಿಕ್ಕಿರುವ ದಾಖಲೆಗಳ ಪೈಕಿ ಒಂದು ದಾಖಲೆಯನ್ನು ಕೊಟ್ಟು ಬಿಡಿ ಎಂದ. ಆದರೆ, ಐಟಿ ಅಧಿಕಾರಿಗೆ ಫೋನಾಯಿಸುತ್ತಿದ್ದಂತೆ ಆತ ಸ್ಥಳದಿಂದ ಪರಾರಿಯಾದ ಎಂದು ಹೇಳಿದರು.
ಯಾರು ಈ ಅವಿನಾಶ್‌?
ಅವಿನಾಶ್‌ ಅಮರ್‌ ಲಾಲ್‌ ಕುಕ್ರೇಜಾ ರಿಯಲ್‌ ಎಸ್ಟೇಟ್‌ ಉದ್ಯಮಿ. ಕೆ.ಎಚ್‌ ರಸ್ತೆಯಲ್ಲಿ ಜೆ.ಕೆ ಟೈರ್ಸ್‌ ಸೇರಿದಂತೆ ನಾನಾ ಕಡೆಗಳಲ್ಲಿ ಅವಿನಾಶ್‌ ಟೈರ್ಸ್‌ ಹೆಸರಿನಲ್ಲಿ ಮಳಿಗೆಗಳಿವೆ. ಜತೆಗೆ ಇನ್ನಿತರ ವ್ಯಾಪಾರಗಳಲ್ಲಿಯೂ ಅವಿನಾಶ್ ತೊಡಗಿದ್ದಾರೆ. ಕೆ.ಎಚ್‌ ರಸ್ತೆ ನಂಜಪ್ಪ ಲೇಔಟ್‌ನಲ್ಲಿ ಕುಟುಂಬ ಸದಸ್ಯರ ಜತೆ ವಾಸವಿದ್ದಾರೆ. ಬೌರಿಂಗ್‌, ಬೆಂಗಳೂರು ಕ್ಲಬ್‌ ಸೇರಿ ನಾನಾ ಕ್ಲಬ್‌ಗಳಲ್ಲಿ ಅವಿನವಾಶ್ ಸದಸ್ಯತ್ವ ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com