

ಬೆಂಗಳೂರು: ಕಳೆದ ವರ್ಷ ಫೆಬ್ರವರಿಯವರೆಗೆ 138.50 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಘೋಷಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈ ವರ್ಷ ಲಾಭದಲ್ಲಿದೆ. ಈ ವರ್ಷ ಫೆಬ್ರವರಿಯವರೆಗೆ 10.29 ಕೋಟಿ ರೂಪಾಯಿ ಲಾಭ ಮಾಡಿರುವ ಕೆಎಸ್ ಆರ್ ಟಿಸಿ ಈ ವರ್ಷಾಂತ್ಯಕ್ಕೆ 5 ಕೋಟಿ ರೂಪಾಯಿ ಹೆಚ್ಚು ಲಾಭ ಮಾಡಿಕೊಳ್ಳುವ ನಿರೀಕ್ಷೆಯಿದೆ.
ನಿರ್ವಹಣೆ ವೆಚ್ಚ ಅಧಿಕವಾದರೂ ಕೂಡ ಈ ವರ್ಷ ಕೆಎಸ್ಆರ್ ಟಿಸಿ ಲಾಭ ಮಾಡಿಕೊಂಡಿದೆ ಎಂದು ಕೆಎಸ್ಆರ್ ಟಿಸಿ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ತಿಳಿಸಿದ್ದಾರೆ. ಕೆಎಸ್ಆರ್ ಟಿಸಿ 2015-16ರಲ್ಲಿ 50.95 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದೆ ಎಂದು ಘೋಷಿಸಿಕೊಂಡಿತ್ತು. ಆದರೆ ಕಳೆದ ವರ್ಷ ನಿಗಮಕ್ಕೆ 177 ಕೋಟಿ ರೂಪಾಯಿ ನಷ್ಟವಾಗಿತ್ತು.