ವಡಗೂರು(ಕೋಲಾರ): ವಡಗೂರು ಗೇಟ್ ಬಳಿ ವೇಗವಾಗಿ ಬಂದ ಕಾರು ಬಸ್ ಗಾಗಿ ಕಾಯುತ್ತಾ ನಿಂತಿದ್ದ ಇಬ್ಬರು ವಿದ್ಯಾರ್ಥಿ ಹಾಗೂ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಕೆಂಬೋಡಿ ಸರ್ಕಾರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ನಾರಾಯಣಸ್ವಾಮಿ(13), ಏಳನೇ ತರಗತಿ ವಿದ್ಯಾರ್ಥಿ ಸುದರ್ಶನ್(12) ಮತ್ತು ವಡಗೂರು ಗ್ರಾಮದ 25 ವರ್ಷದ ವೆಂಕಟಪ್ಪ ಮೃತಪಟ್ಟಿದ್ದಾರೆ.
ವಿದ್ಯಾರ್ಥಿಗಳಾದ ನಾರಯಣಸ್ವಾಮಿ ಮತ್ತು ಸುದರ್ಶನ್ ಶಾಲೆ ಮುಗಿದ ನಂತರ ಸಂಜೆ ವಡಗೂರು ಗೇಟ್ ನಲ್ಲಿ ಮನೆಗೆ ಹಿಂದಿರುಗಲು ಬಸ್ ಗಾಗಿ ಕಾಯುತ್ತಾ ನಿಂತಿದ್ದರು. ವೆಂಕಟಪ್ಪ ಬೈಕ್ ನಲ್ಲಿ ಊರಿಗೆ ಹೋಗುತ್ತಿದ್ದರು.
ಈ ವೇಳೆ ಅದೇ ಮಾರ್ಗವಾಗಿ ಬಂದ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಹರಿದು ವೆಂಕಟಪ್ಪರ ಬೈಕ್ ಗೆ ಗುದ್ದಿದೆ. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗಳು ಹಾಗೂ ವೆಂಕಟಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ವಡಗೂರು ಗೇಟ್ ಪೊಲೀಸರು ಕಾರು ಚಾಲಕನನ್ನು ಬಂಧಿಸಿದ್ದಾರೆ.