ಬಾಗಲಕೋಟೆ: ವಿಧಾನಸಭೆ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ರಾಜ್ಯದಲ್ಲಿ ಕಾಂಚಾಣ ಸದ್ದು ಮಾಡುತ್ತಿದ್ದು, ಶನಿವಾರ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 50 ಲಕ್ಷ ನಗದನ್ನು ಬಾಗಲಕೋಟೆ ಸಮೀಪದ ಹೊನ್ನಾಕಟ್ಟಿ ಕ್ರಾಸ್ ನ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಕೆಎ 29, ಎನ್ 2053 ಸಂಖ್ಯೆಯ ಹುಂಡೈ ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಪಡೆದ ಫ್ಲೈಯಿಂಗ್ ಸ್ಕ್ವಾಡ್, ಬಾಗಲಕೋಟೆ ತಹಶಿಲ್ದಾರ್ ಹಾಗೂ ಇಲ್ಲಿನ ಗ್ರಾಮೀಣ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಹಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹುಂಡೈ ಕಾರು ಇಳಕಲ್ ನಿಂದ ಬಾಗಲಕೋಟೆ ಕಡೆಗೆ ಹೋಗುತ್ತಿತ್ತು. ಕಾರು ತಡೆದು ಪರಿಶೀಲನೆ ನಡೆಸಿದಾಗ ಹಣ ಇಳಕಲ್ ಡಿಸಿಸಿ ಬ್ಯಾಂಕ್‌ಗೆ ಸೇರಿದ್ದು ಎಂದಿದ್ದಾರೆ. ಆದರೆ, ಹಣ ಬ್ಯಾಂಕ್ ಗೆ ಸೇರಿರುವುದು ಎಂಬುದಕ್ಕೆ ಪೂರಕ ದಾಖಲೆಗಳು ಇಲ್ಲ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ತಿಳಿಸಿದ್ದಾರೆ. ಅಲ್ಲದೆ ಕಾರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ೫ ಲಕ್ಷ ರುಪಾಯಿ ನಗದನ್ನು ಬಾಗಲಕೋಟೆ ತಹಶೀಲ್ದಾರ ವಿನಯ ಕುಲಕರ್ಣಿ ನೇತೃತ್ವದ ತಪಾಸಣಾ ತಂಡ ವಶಕ್ಕೆ ಪಡೆದಿದೆ.
ತಾಲ್ಲೂಕಿನ ಮುರನಾಳ ಗ್ರಾಮದ ಗುತ್ತಿಗೆದಾರ ಶಿವಾನಂದ ಕೋವಳ್ಳಿ ಮಹೀಂದ್ರಾ ಟಿಯುವಿ ವಾಹನದಲ್ಲಿ ಹಣವನ್ನು ರಾಂಪುರಕ್ಕೆ ಒಯ್ಯುತ್ತಿದ್ದರು ಎನ್ನಲಾಗಿದೆ.