ಚುನಾವಣಾ ಪ್ರಚಾರಕ್ಕೆ ಬಿಬಿಎಂಪಿ ಅಡ್ಡಿ, ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಬಿಬಿಎಂಪಿ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಪಕ್ಷ ಹೈಕೋರ್ಟ್ ಮೆಟ್ಟಿಲೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಬಿಬಿಎಂಪಿ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಪಕ್ಷ ಹೈಕೋರ್ಟ್ ಮೆಟ್ಟಿಲೇರಿದೆ.
ಬಿಬಿಎಂಪಿ ಆಯುಕ್ತರು ಉದ್ದೇಶ ಪೂರ್ವಕವಾಗಿಯೇ ತಮಗೆ ನಗರದಲ್ಲಿ ಫ್ಲೆಕ್ಸ್ ಗಳನ್ನು ಅಳವಡಿಸಲು ಅನುಮತಿ ನಿರಾಕರಿಸಿದ್ದಾರೆ. ರಾಜಕೀಯ ದುರುದ್ದೇಶದಿಂದ ಬಿಬಿಎಂಪಿ ತಮಗೆ ಅನುಮತಿ ನಿರಾಕರಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಇದೀಗ ಬಿಜೆಪಿ ಸಲ್ಲಿಕೆ ಮಾಡಿರುವ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ತೆಗೆದುಕೊಂಡಿದೆ. ಚುನಾವಣೆಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೂಕ್ತ ಶುಲ್ಕ ಪಡೆದು ಫ್ಲೆಕ್ಸ್, ಹೋರ್ಡಿಂಗ್ಸ್ ಅಳವಡಿಕೆಗೆ ಅನುಮತಿ ನೀಡುವಂತೆ ಸಲ್ಲಿಸಿದ್ದ ಮನವಿಯನ್ನು ಬಿಬಿಎಂಪಿ ತಿರಸ್ಕರಿಸಿದೆ. ಹೀಗಾಗಿ ಅನುಮತಿ ನೀಡುವಂತೆ ಬಿಬಿಎಂಪಿಗೆ ನಿರ್ದೇಶಿಸುವಂತೆ ಬಿಜೆಪಿ ತನ್ನ ಅರ್ಜಿಯಲ್ಲಿ ಕೋರಿದೆ. 
ನಗರದಲ್ಲಿ ಅಳವಡಿಸಲಾಗಿರುವ ಹೋರ್ಡಿಂಗ್ ಗಳಲ್ಲಿ ಚುನಾವಣಾ ಪ್ರಚಾರದ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ನಿರಾಕರಿಸಿದೆ. ಜಾಹೀರಾತು ಫಲಕಗಳ ಮೂಲಕ ಪ್ರಚಾರ ಕೈಗೊಳ್ಳಲು ಅನುಮತಿ ನೀಡುವಂತೆ ಕೋರಿ ರಾಜಕೀಯ ಪಕ್ಷಗಳು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದವು. ಆದರೆ ಪಾಲಿಕೆ ಆಯುಕ್ತರು ಅನುಮತಿ ನಿರಾಕರಿಸಿದ್ದರು. ಹೀಗಾಗಿ, ರಾಜಕೀಯ ಪಕ್ಷಗಳ ಮುಖಂಡರು ಆಯೋಗಕ್ಕೆ ದೂರು ನೀಡಿದ್ದರು. 
ಈ ಹಿನ್ನೆಲೆಯಲ್ಲಿ ಆಯೋಗವು ಖಾಲಿ ಇರುವ ಜಾಹೀರಾತು ಫಲಕಗಳನ್ನು ಎಲ್ಲ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಾನೂನು ಇಲಾಖೆಯ ಕಾರ್ಯದರ್ಶಿ, ಪೊಲೀಸ್ ಮತ್ತು ಬಿಬಿಎಂಪಿ ಆಯುಕ್ತರನ್ನೊಳಗೊಂಡ ಸಮಿತಿಯನ್ನು ರಚಿಸಿ ಕಳೆದ ಏಪ್ರಿಲ್ 24ರಂದು ಆದೇಶ ಹೊರಡಿಸಿತ್ತು. 
ಸಮಿತಿ ತಕ್ಷಣವೇ ಸಭೆ ಸೇರಿ ಲಭ್ಯವಿರುವ ಜಾಹೀರಾತು ಹೋರ್ಡಿಂಗ್ಸ್ ಗಳನ್ನು ರಾಜಕೀಯ ಪ್ರಚಾರಕ್ಕೆ ಎಲ್ಲರಿಗೂ ಸಮಾನವಾಗಿ ಹಂಚಲು ಕ್ರಮ ಕೈಗೊಳ್ಳಬೇಕು. ಜಾಹೀರಾತು ಪ್ರದರ್ಶನದ ಶುಲ್ಕವನ್ನು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ಸೇರಿಸಬೇಕೆಂದು ಚುನಾವಣಾ ಆಯೋಗ ನಿರ್ದೇಶನ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com