ಪ್ರಣಾಳಿಕೆಯಲ್ಲಿನ ಭರವಸೆಗಳ ಈಡೇರಿಕೆ ಕಡ್ಡಾಯಗೊಳಿಸಿ; ಹೈಕೋರ್ಟ್ ಗೆ ಪಿಐಎಲ್

ಚುನಾವಣೆಯ ಪೂರ್ವದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡುವ ಎಲ್ಲ ಆಶ್ವಾಸನೆಗಳ ಈಡೇರಿಕೆ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಚುನಾವಣೆಯ ಪೂರ್ವದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡುವ ಎಲ್ಲ ಆಶ್ವಾಸನೆಗಳ ಈಡೇರಿಕೆ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ.
ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿನ ಅಂಶಗಳಿಗೆ ಕಾನೂನು ಮಾನ್ಯತೆ ನೀಡುವ ಮೂಲಕ ಅವುಗಳ ಕಡ್ಡಾಯ ಈಡೇರಿಕೆಗೆ ಆದೇಶ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ. ಆ್ಯಂಟಿ ಕರಪ್ಶನ್ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದು, ಚುನಾವಣಾ ಪ್ರಣಾಳಿಕೆಗಳನ್ನು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದೆ.
'ಮತದಾರರನ್ನು ಓಲೈಸುವ ಮತ್ತು ಅವರ ದಾರಿ ತಪ್ಪಿಸುವ ಮಾರ್ಗವಾಗಿ ರಾಜಕೀಯ ಪಕ್ಷಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಮತದಾರರಿಗೆ ಇಲ್ಲಸಲ್ಲದ ಆಮಿಷಗಳನ್ನು ಒಡ್ಡಿ ಮತದಾನದ ಬಳಿಕ ಅವರನ್ನು ಮೂರ್ಖರನ್ನಾಗಿಸುತ್ತಿವೆ. ಅಧಿಕಾರಕ್ಕೇರುವ ಒಂದೇ ಉದ್ದೇಶದಿಂದ ಈಡೇರಿಕೆ ಮಾಡಲಾಗದ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿ ಮತದಾರರನ್ನು ರಾಜಕೀಯ ಪಕ್ಷಗಳು ಮೋಸಗೊಳಿಸುತ್ತಿವೆ. ಹೀಗಾಗಿ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಕಡ್ಡಾಯವಾಗಿ ಈಡೇರಿಕೆ ಮಾಡಲೇಬೇಕು ಹೈಕೋರ್ಟ್ ಆದೇಶ ನೀಡಬೇಕು ಎಂದು ಅರ್ಜಿ ಸಲ್ಲಿಕೆ ಮಾಡಲಾಗಿದೆ. 
ಪ್ರಸ್ತುತ ಅರ್ಜಿ ಸ್ವೀಕರಿಸಿರುವ ವಿಭಾಗೀಯ ಪೀಠದ ನ್ಯಾಯಮೂರ್ತಿ ಬಿ ವೀರಪ್ಪ ಹಾಗೂ ನ್ಯಾಯಮೂರ್ತಿ ಸುನಿಲ್ ದತ್ ನೇತೃತ್ವದ ದ್ವಿಸದಸ್ಯ ಪೀಠ, ಚುನಾವಣಾ ಆಯೋಗದ ಕಾರ್ಯದರ್ಶಿ, ಅಧ್ಯಕ್ಷರು ಮತ್ತು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಆ್ಯಂಟಿ ಕರಪ್ಶನ್ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ, ಈ ಹಿಂದೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೇರಿದ ಪಕ್ಷ ಮತ್ತೆ 2018ರಲ್ಲೂ ಸ್ಪರ್ಧೆ ಮಾಡುತ್ತಿದೆ. ಆದರೆ ಕಳೆದ ಬಾರಿ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಕೇವಲ ಅಧಿಕಾರಕ್ಕೇರಬೇಕು ಎನ್ನುವ ಒಂದೇ ಕಾರಣಕ್ಕಾಗಿ ಪೊಳ್ಳು ಭರವಸೆಗಳನ್ನು ನೀಡಿ ಮತದಾರರನ್ನು ಸೆಳೆಯುವ ಅಥವಾ ಮೂರ್ಖರನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಚುನಾವಣಾ ಪ್ರಣಾಳಿಕೆಯನ್ನು ರಾಜಕೀಯ ಪಕ್ಷಗಳು ಕೇವಲ ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ತು, ಪ್ರಣಾಳಿಕೆಯ ಮಹತ್ವವನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತಿವೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂತೆಯೇ ಪಕ್ಷಗಳ ಚುನಾವಣಾ ಪ್ರಣಾಳಿಕೆಯನ್ನು ಪಕ್ಷದ ಅಧ್ಯಕ್ಷರೂ ಮತ್ತು ಅಭ್ಯರ್ಥಿಗಳು ಚುನಾವಣಾ ಆಯೋಗದ ಅನುಮತಿ ಪಡೆಯದೇ ಪ್ರಚಾರ ಮಾಡುವಂತಿಲ್ಲ ಎಂದೂ ತಮ್ಮ ಅರ್ಜಿಯಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com