ವಿಧಾನಸಭೆ ಚುನಾವಣೆ ಮತಎಣಿಕೆ ಆರಂಭ; ಮಧ್ಯಾಹ್ನ 1 ಗಂಟೆಗೆ ಬಹುತೇಕ ಫಲಿತಾಂಶ ಬಹಿರಂಗ

Published On :
ಬೆಂಗಳೂರು: ರಾಜ್ಯವಷ್ಟೇ ಅಲ್ಲದೆ, ಇಡೀ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಸಭೆ ಮತಎಣಿಕೆ ಪ್ರಕ್ರಿಯೆ ಮಂಗಳವಾರ ಆರಂಭಗೊಂಡಿದ್ದು, ಇಂದು ಮಧ್ಯಾಹ್ನ 1 ಗಂಟೆ ವೇಳೆ ಬಹುತೇಕ ಫಲಿತಾಂಶ ಬಹಿರಂಗಗೊಳ್ಳಲಿದೆ ಎಂದು ಚುನಾವಣಾ ಆಯೋಗ ಮಂಗಳವಾರ ಹೇಳಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು, ಬಿಗಿ ಭದ್ರತೆಯಲ್ಲಿ ಮತ ಯಂತ್ರಗಳಿಗೆ ಅಳವಡಿಸಿರುವ ಕಂಟ್ರೋಲ್ ಯೂನಿಟ್ ಮತ್ತು ವಿವಿ ಪ್ಯಾಟ್ ಗಳನ್ನು ಮತ ಎಣಿಕೆ ಕೇಂದ್ರಕ್ಕೆ ಬಿಗಿ ಭದ್ರತೆಯಲ್ಲಿ ಬೆಳಿಗ್ಗೆ 7.30ರ ಸುಮಾರಿಗೆ ತೆಗೆದುಕೊಂಡು ಬರಲಾಗುವುದು. ರಾಜ್ಯದ 222 ಕ್ಷೇತ್ರಗಳ ಒಟ್ಟು 2622 ಅಭ್ಯರ್ಥಿಗಳ ರಾಜಕೀಯ ಭವಿಷ್ಯವು ಮತಪೆಟ್ಟಿಗೆಯಿಂದ ಹೊರಬರಲಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ಬಹುತೇಕ ಫಲಿತಾಂಶ ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ.
ನಗರ ಮತ್ತು ಜಿಲ್ಲಾ ಕೇಂದ್ರ ಮಟ್ಟದಲ್ಲಿ 38 ಮತ ಎಣಿಕೆ ಕೇಂದ್ರಗಳನ್ನು ತೆರೆಯಲಾಗಿದೆ. 222 ಮತಕ್ಷೇತ್ರಗಳ ಮತ ಎಣಿಕೆಗಾಗಿ ರಾಜ್ಯದಲ್ಲಿ 38 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 5 ಕಡೆ, ತುಮಕೂರು 3, ಚಿತ್ರದುರ್ಗ, ದಕ್ಷಿಣ ಕನ್ನಡ ಮ್ತ್ತು ಮೈಸೂರು ಜಿಲ್ಲೆಯಗಳಲ್ಲಿ ತಲಾ 2 ಕಡೆ ಮತ್ತು ಇನ್ನುಳಿದ ಜಿಲ್ಲೆಗಳಲ್ಲಿ ತಲಾ ಒಂದೊಂದು ಮತ ಎಣಿಕೆ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಮತ ಎಣಿಕೆ ನಡೆಯಲು ಅನುವು ಮಾಡಿಕೊಡುವ ದೃಷ್ಟಿಯಿಂದ 222 ಮತಕ್ಷೇತ್ರಗಳಿಗೆ ಪರಿವೀಕ್ಷಕರನ್ನು ನೇಮಿಸಲಾಗಿದೆ. ಹಾಗೆಯೇ ಹೆಚ್ಚುವರಿಯಾಗಿ ತಲಾ 14 ಮಂದಿಯಂತೆ ಸೂಕ್ಷ್ಮ ಪರಿವೀಕ್ಷಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಫಲಿತಾಂಶ ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲದೆ, ರಾಷ್ಟ್ರ ರಾಜಕಾರಣದಲ್ಲೂ ಹಲವು ಬದಲಾವಣೆಗಳಿಗೆ ಮತ್ತು ಬೆಳವಣಿಗೆಗೆ ನಾಂದಿ ಹಾಡುವ ಸಾಧ್ಯತೆಗಳಿದ್ದು, ಇಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಕೆ ಪ್ರಕ್ರಿಯೆ ಆರಂಭಗೊಂಡಿದೆ. 11 ವೇಳೆಗೆ ಫಲಿತಾಂಶದ ಚಿತ್ರಣ ದೊರೆಯುವ ನಿರೀಕ್ಷೆಗಳಿವೆ. ಈ ಹಿನ್ನಲೆಯಲ್ಲಿ ಸಂಭ್ರಮಾಚರಣೆಗಳು, ಪಟಾಕಿ ಸಿಡಿಸುವುದು, ಮೆರವಣಿಗೆಗಳಿಗೆ ಪೊಲೀಸರು ನಿರ್ಬಂಧ ಹೇಳಿದ್ದಾರೆ.
ಜಾಲಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ ಜಪ್ತಿಯಾದ ಮತದಾರರ ಚೀಟಿ ಪರಿಶೀಲನೆ ಕಾರ್ಯವು ಪ್ರಗತಿಯಲ್ಲಿದೆ. ಮತದಾರರ ಚೀಟಿಗಳನ್ನು ಸೂಕ್ತವಾಗಿ ಪರಿಶೀಲನೆ ನಡೆಸಿ, ಅಸಲಿ ಮತದಾರರಿಗೆ ಮರಳಿಸಬೇಕು. ಪ್ರತೀಯೊಬ್ಬ ಮತದಾರ ಚೀಟಿಯ ಜೆರಾಕ್ಸ್ ಪ್ರತಿಯನ್ನು ಪೊಲೀಸರು ಪಡೆದು, ಬಳಿಕ ಆ ಮತದಾರನ ಪೂರ್ವಾಪರ ಮಾಹಿತಿ ಸಂಗ್ರಹಿಸುವಂತೆ ಸಹ ನಿರ್ದೇಶಿಸಲಾಗಿದ್ದು, ಈ ಕಾರ್ಯವು ಮೇ.21ರೊಳಗೆ ಮುಕ್ತಾಯಗೊಳಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಮತದಾರರ ಚೀಟಿ ಸಂಗ್ರಹ ಪ್ರಕರಣ ಸಂಬಂಧ ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದು, ಈ ತನಿಖೆ ಮುಗಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮೇ.28ರ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೆಲ ದಿನಗಳ ಹಿಂದಷ್ಟೇ ಜಾಲಹಳ್ಳಿಯ ಎಸ್ಎಲ್'ವಿ ವ್ಯೂವ್ ಪಾರ್ಕ್ ಅಪಾರ್ಟ್'ಮೆಂಟ್ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾಗ 9654 ಮತದಾರರ ಚೀಟಿಗಳು ಪತ್ತೆಯಾಗಿದ್ದವು. ಈ ಪ್ರಕಣವು ರಾಜಕೀಯ ವಲಯದಲ್ಲಿ ತೀವ್ರ ಸಂಚನ ಮೂಡಿಸಿತ್ತು. ಕೊನೆಗೆ ಚುನಾವಣಾ ಅಕ್ರಮದ ಹಿನ್ನಲೆಯಲ್ಲಿ ಆ ಕ್ಷೇತ್ರದ ಚುನಾವಣೆಯ ಮುಂದೂಡಿಕೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


