ಕುಮಾರಸ್ವಾಮಿ, ಪರಮೇಶ್ವರ್ ಅವರನ್ನು ಹೊರತುಪಡಿಸಿ ಉಬಯ ಪಕ್ಷಗಳಿಂದ ಬೇರಾರೂ ಪ್ರಮಾಣವಚನ ಸ್ವೀಕರಿಸುತ್ತಿಲ್ಲ. ವಿಶ್ವಾಸಮತಯಾಚನೆ ನಂತರ ಸಂಪುಟ ವಿಸ್ತರಣೆ ಕೈಗೊಳ್ಳಲು ನಿರ್ಧಾರ ಕೈಗೊಳ್ಳಲಾಗಿದ್ದು, ಬಹುತೇಕ ಮುಂದಿನ ವಾರದ ವೇಳೆಗೆ ಕುಮಾರಸ್ವಾಮಿ ಅವರ ಸಂಪುಟ ಪೂರ್ಣ ಪ್ರಮಾಣದಲ್ಲಿ ಜವಾಬ್ದಾರಿಗಳನ್ನು ನಿಭಾಯಿಸಲಿದೆ.
ಇಂದು ಸಂಜೆ 4.30ಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರಿಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದ ಬಳಿಕ ಜೆಡಿಎಸ್'ಗೆ ಮುಖ್ಯಮಂತ್ರಿ ಹುದ್ದೆ ಬಹುತೇಕ ಖಚಿತವಾಗಿತ್ತು. ಇದರಂತೆ ಕಂಠೀರವ ಕ್ರೀಡಾಂಗಣದಲ್ಲಿ ಲಕ್ಷಾಂತರ ಜನಸ್ತೋಮದ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಸುವ ಉದ್ದೇಶ ಹೊಂದಲಾಗಿತ್ತು. ಆದರೆ, ನಾನಾ ಕಾರಣಗಳಿಂದಾಗಿ ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸುವುದನ್ನು ಸ್ಥಗಿತಗೊಳಿಸಿ, ಅರಮನೆ ಮೈದಾನದಲ್ಲಿ ನಡೆಸುವ ಬಗ್ಗೆ ಆಲೋಚನೆಗಳು ನಡೆದಿತ್ತು. ಆದರೆ, ಆ ಸ್ಥಳವು ಸರಿಕಾಣದ ಹಿನ್ನಲೆಯಲ್ಲಿ ಅಂತಿಮವಾಗಿ ವಿಧಾನಸೌಧದ ಮುಂದೆಯೇ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಸಲು ಜೆಡಿಎಸ್-ಕಾಂಗ್ರೆಸ್ ತೀರ್ಮಾನಿಸಿತ್ತು.